ಮಮತಾ ಬ್ಯಾನರ್ಜಿಗೆ ಮುಂಬೈ ಕೋರ್ಟ್​ನಿಂದ ಸಮನ್ಸ್​; ಮಾ.2ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಮುಂಬೈ: ಮುಂಬೈ ನ್ಯಾಯಾಲಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸಮನ್ಸ್​ ನೀಡಿದ್ದು, ಮಾರ್ಚ್​ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
2021ರ ಡಿಸೆಂಬರ್​ನಲ್ಲಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವ ತೋರಿಸಲಿಲ್ಲ. ಈ ಮೂಲಕ ರಾಷ್ಟ್ರಗೀತೆಗೆ ಅವಮಾನಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮನ್ಸ್​ ಜಾರಿ ಮಾಡಿರುವ ನ್ಯಾಯಾಲಯ, ಆರೋಪಿ ವಿರುದ್ಧ ಮುಂದಿನ ಪ್ರಕ್ರಿಯೆ ನಡೆಸಲು ಯಾವುದೇ ಅಡ್ಡಿಯೂ ಇಲ್ಲ ಎಂದು ಹೇಳಿದೆ.
ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಂಬೈ ಘಟಕದ ಕಾರ್ಯಕಾರಿ ವಿವೇಕಾನಂದ ಗುಪ್ತಾ ಡಿಸೆಂಬರ್​​ನಲ್ಲಿ ಮುಂಬೈ ಮೆಟ್ರೋಪೊಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮೆಟ್ಟಿಲೇರಿದ್ದರು. ಮಮತಾ ವಿರುದ್ಧ ಎಫ್​ಐಆರ್ ದಾಖಲಿಸುವಂತೆಯೂ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಂದು ರಾಷ್ಟ್ರಗೀತೆ ಹಾಡುವಾಗ ಅವರು ಥಟ್ಟನೆ ನಿಲ್ಲಿಸಿ, ವೇದಿಕೆಯಿಂದ ನಿರ್ಗಮಿಸಿದ್ದು ಯೂಟ್ಯೂಬ್​, ಡಿವಿಡಿಯಲ್ಲಿರುವ ವಿಡಿಯೋ ಕ್ಲಿಪ್​ನಿಂದ ಸ್ಪಷ್ಟವಾಗಿದೆ. ಈ ವಿಡಿಯೋಗಳನ್ನು ದೂರುದಾರರು ನಮಗೆ ನೀಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಯಾವುದೇ ಸಂದರ್ಭದಲ್ಲಿ ಯಾರಾದರೂ ರಾಷ್ಟ್ರಗೀತೆ ಹಾಡುತ್ತಿರಲಿ ಅಥವಾ ಇನ್ಯಾವುದೇ ಮೂಲದಿಂದ ಅದು ಪ್ರಸಾರವಾಗುತ್ತಿರಲಿ, ಆ ಸಮಯದಲ್ಲಿ ಅದನ್ನು ಕೇಳುತ್ತಿರುವವರು ಎದ್ದುನಿಲ್ಲಬೇಕು ಎಂದು 2015ರಲ್ಲಿ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಅದನ್ನು ಮಮತಾ ಬ್ಯಾನರ್ಜಿ ಉಲ್ಲಂಘಿಸಿದ್ದಾರೆ ಎಂದು ವಿವೇಕಾನಂದ ಗುಪ್ತಾ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement