ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞರಿಂದ ಚಿಕಿತ್ಸೆ ಪಡೆದ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ಮುಂದಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವು ಏಪ್ರಿಲ್ 7 ರಿಂದ 9 ರವರೆಗೆ ದಾಮೋಹ್‌ನಲ್ಲಿ ತನಿಖೆ ನಡೆಸಲಿದೆ ಎಂದು ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ಎನ್‌ಎಚ್‌ಆರ್‌ಸಿಗೆ ನೀಡಿದ ದೂರಿನ ಪ್ರಕಾರ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾದ ‘ಡಾ ಎನ್ ಜಾನ್ ಕ್ಯಾಮ್’ ಎಂಬ ಹೆಸರನ್ನು ಬಳಸಿದ ವ್ಯಕ್ತಿಯೊಬ್ಬರು ತಾನು ವಿದೇಶದಿಂದ ಶಿಕ್ಷಣ ಮತ್ತು ತರಬೇತಿ ಪಡೆದಿಗಿ ಹೇಳಿಕೊಂಡಿದ್ದಾರೆ.ವ್ಯಕ್ತಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ದೂರುದಾರರು ಹೇಳಿದ್ದಾರೆ. ಅವರು ಯುನೈಟೆಡ್ ಕಿಂಗ್‌ಡಮ್‌ನ ಪ್ರಸಿದ್ಧ ಹೃದ್ರೋಗ ತಜ್ಞ ಪ್ರೊಫೆಸರ್ ಜಾನ್ ಕ್ಯಾಮ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ರೋಗಿಗಳನ್ನು ಹಾದಿ ತಪ್ಪಿಸುತ್ತಿದ್ದಾರೆ ಮತ್ತು ಅವರ ತಪ್ಪು ಚಿಕಿತ್ಸೆಯಿಂದಾಗಿ ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶುಕ್ರವಾರ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಕನೂಂಗೊ ಅವರು ದಮೋಹ್‌ನ ಮಿಷನರಿ ಆಸ್ಪತ್ರೆಯೊಂದರಲ್ಲಿ ಹೃದ್ರೋಗ ಚಿಕಿತ್ಸೆಯ ಹೆಸರಿನಲ್ಲಿ ನಕಲಿ ವೈದ್ಯರೊಬ್ಬರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಏಳು ಜನರ ಮರಣದ ಪ್ರಕರಣವು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ದೂರಿನ ಪ್ರಕಾರ, ಈ ಮಿಷನರಿ ಆಸ್ಪತ್ರೆಯು ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಆದ್ದರಿಂದ ಸರ್ಕಾರದ ಹಣವನ್ನು ಸಹ ದುರ್ಬಳಕೆ ಮಾಡಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.
“ಪ್ರಕರಣದ ತನಿಖೆಗೆ ನನ್ನ ಆದೇಶದ ಮೇರೆಗೆ ರಚಿತವಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾ ತಂಡವು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ದಾಮೋಹ್‌ನಲ್ಲಿ ಬೀಡುಬಿಟ್ಟು ತನಿಖೆ ನಡೆಸಲಿದೆ. ಯಾವುದೇ ಸಂತ್ರಸ್ತರು ಅಥವಾ ಇತರ ವ್ಯಕ್ತಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಬಯಸಿದರೆ, ಅವರು ದಾಮೋಹ್‌ನಲ್ಲಿರುವ ತನಿಖಾ ತಂಡವನ್ನು ಭೇಟಿ ಮಾಡಬಹುದು” ಎಂದು ಕನೂಂಗೊ ಭಾನುವಾರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತನಿಖಾ ತಂಡವು ಆಡಳಿತ ಅಧಿಕಾರಿಗಳು ಸೇರಿದಂತೆ ದೂರಿನಲ್ಲಿ ಉಲ್ಲೇಖಿಸಲಾದ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಜಬಲಪುರ ನಾಕಾ ನಿವಾಸಿ ದೀಪಕ ತಿವಾರಿ ಎಂಬವರು ತಮ್ಮ ದೂರಿನಲ್ಲಿ ಈ ವರ್ಷದ ಜನವರಿ ಮತ್ತು ಫೆಬ್ರವರಿ ನಡುವೆ ದಾಮೋಹ್ಸ್ ಮಿಷನ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಅನರ್ಹ ಮತ್ತು ಅನಧಿಕೃತ ವೈದ್ಯರ ಚಿಕಿತ್ಸೆಯಿಂದ ಅನೇಕ ಜನರು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಲ್ಲಿ ‘ಡಾ.ಎನ್.ಜಾನ್ ಕ್ಯಾಮ್’ ಅವರು ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವೈದ್ಯನ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಆಗಿದ್ದು, ಈತ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ನಕಲಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು, ಆತನ ತಪ್ಪು ಚಿಕಿತ್ಸೆಯಿಂದ ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ಸಂಬಂಧಪಟ್ಟ ವೈದ್ಯರು ನಿರಂತರ ವಿವಾದಗಳಲ್ಲಿ ಸಿಲುಕಿದ್ದು, ಯಾವುದೇ ಸ್ಥಳದಲ್ಲಿ ಹೆಚ್ಚು ಕಾಲ ಇರದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ದಾಮೋಹ್ ಜಿಲ್ಲಾಧಿಕಾರಿ ಸುಧೀರ ಕೋಚಾರ್ ತಿಳಿಸಿದ್ದಾರೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಿಷನ್ ಆಸ್ಪತ್ರೆಯಲ್ಲಿ “ಗಂಭೀರ ಅಕ್ರಮಗಳ” ಬಗ್ಗೆ ಮಾಹಿತಿ ಪಡೆದ ನಂತರ, ಎನ್‌ಎಚ್‌ಆರ್‌ಸಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಮತ್ತು ಅದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ದೂರುದಾರ ತಿವಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ