ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

 ಕಾರವಾರ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ಸಂಪೂರ್ಣ ರಾಜ್ಯ ಸರ್ಕಾರದ್ದಾಗಿದ್ದು, ಕೇಂದ್ರ ಸರ್ಕಾರ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡುತ್ತದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್‌.ಪಾಟೀಲ ತಿಳಿಸಿದ್ದಾರೆ.
ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಕುರಿತು ಆಕ್ಷೇಪಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬರೆದ ಪತ್ರಕ್ಕೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಈ ಉತ್ತರ ನೀಡಿದ್ದಾರೆ.
ಯಾವುದೇ ನೀರಾವರಿ ಅಥವಾ ನದಿ ಜೋಡಣೆ ಯೋಜನೆಗಳನ್ನು ರೂಪಿಸುವುದು, ಅವುಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಗೆ ಸೇರಿದೆ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಅಧಿಕೃತವಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, 2025ರ ಡಿಸೆಂಬರ್ 23ರಂದು ಮಾಡಿಕೊಂಡ ಒಪ್ಪಂದದ ಪ್ರಕಾರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಈ ಯೋಜನೆಯ ಡಿಪಿಆರ್‌ ಸಿದ್ಧಪಡಿಸುವ ಕಾರ್ಯ ಕೈಗೊಂಡಿದೆ ಎಂದು ತಿಳಿಸಿರುವ ಕೇಂದ್ರ ಸಚಿವರು, ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವುದು ಅಧ್ಯಯನ ಮತ್ತು ಯೋಜನೆ ರೂಪಿಸುವ ಪ್ರಕ್ರಿಯೆಯಾಗಿದೆ. ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಯೋಜನೆಯ ಸಾಧ್ಯತೆಗಳು, ಅಗತ್ಯಗಳು ಹಾಗೂ ವಿವಿಧ ಅಂಶಗಳನ್ನು ಪರಿಶೀಲಿಸಿ, ಮುಂದಿನ ನಿರ್ಧಾರಗಳಿಗೆ ಅಗತ್ಯವಾದ ಮಾಹಿತಿ ಸಂಗ್ರಹಿಸುವ ಅಧ್ಯಯನ ಮತ್ತು ಯೋಜನಾ ರೂಪಿಸುವಿಕೆಯ ಹಂತವಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

ಡಿಪಿಆರ್‌ ಸಿದ್ಧಪಡಿಸುವ ಸಂದರ್ಭದಲ್ಲಿ ಬೇಡ್ತಿ ನದಿ ಜಲಾನಯನ ಪ್ರದೇಶದ ಪರಿಸರ ಹಾಗೂ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಎನ್‌ಡಬ್ಲ್ಯುಡಿಎ ಪರಿಶೀಲಿಸಲಿದೆ. ನದಿಯ ಕೆಳಹರಿವಿನ ಪರಿಸರ ವ್ಯವಸ್ಥೆ, ನದಿಯಲ್ಲಿ ನಿರಂತರವಾಗಿ ಹರಿಯಬೇಕಾದ ಕನಿಷ್ಠ ಸಹಜ ಹರಿವು, ಕೃಷಿ ಚಟುವಟಿಕೆಗಳು, ಮೀನುಗಾರಿಕೆ, ಅಂತರ್ಜಲ ಮರುಪೂರಣ ಹಾಗೂ ಸ್ಥಳೀಯ ಸಮುದಾಯಗಳ ಅಗತ್ಯಗಳನ್ನು ಅಧ್ಯಯನದ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ಮುಂದಿನ ಕ್ರಮಗಳು ಕಾನೂನುಬದ್ಧ ನಿಯಮಗಳು, ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ನಿಯಮಗಳು ಹಾಗೂ ಇತರ ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿ ಇರಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಯೋಜನೆಯ ಕುರಿತು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಅದನ್ನು ಅವಲಂಬಿಸಿರುವ ಪರಿಸರ ವ್ಯವಸ್ಥೆಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ, ಕೃಷಿ, ಮೀನುಗಾರಿಕೆ ಹಾಗೂ ಅಂತರ್ಜಲದ ಮೇಲೆ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸುವುದು ಈ ಅಧ್ಯಯನದ ಪ್ರಮುಖ ಭಾಗವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement