ಅತ್ಯಾಚಾರ ಸಂತ್ರಸ್ತರಿಗೆ ಎರಡು-ಬೆರಳಿನ ಪರೀಕ್ಷಾ ನಿಷೇಧ ಪುನರುಚ್ಚರಿಸಿದ ಸುಪ್ರೀಂ ಕೋರ್ಟ್‌ : ಪರೀಕ್ಷೆಗೆ ಒಳಪಡಿಸುವವರು ತಪ್ಪಿತಸ್ಥರು ಎಂದ ಸರ್ವೋಚ್ಛ ನ್ಯಾಯಾಲಯ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಎರಡು ಬೆರಳಿನ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿ ದುರ್ನಡತೆಯ ತಪ್ಪಿತಸ್ಥನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಸಂತ್ರಸ್ತರು ಹಾಗೂ ಲೈಂಗಿಕ ದೌರ್ಜನಕ್ಕೆ ಒಳಗಾದವರನ್ನು ಎರಡು ಬೆರಳುಗಳ ಪರೀಕ್ಷೆಗೆ ಒಳಪಡಿಸದಂತೆ ತಡೆಯಬೇಕು ಹಾಗೂ ನಿಗಾ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.
ಎರಡು ಬೆರಳುಗಳ ಪರೀಕ್ಷೆಗೆ ವೈಜ್ಞಾನಿಕ ಆಧಾರ ಇಲ್ಲ. ಅತ್ಯಾಚಾರಗಳಂತಹ ಮಾನಸಿಕ ಆಘಾತಕಾರಿ ಸನ್ನಿವೇಶದಿಂದ ಹೊರಬರಲು ಯತ್ನಿಸುವ ಮಹಿಳೆಯರನ್ನು ಈ ರೀತಿ ಎರಡು ಬೆರಳುಗಳ ಪರೀಕ್ಷೆಗೆ ಒಳಪಡಿಸಿ ಮತ್ತಷ್ಟು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುವುದು ಬೇಡ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಭವಿಷ್ಯದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಈ ರೀತಿಯ ಪರೀಕ್ಷೆಗೆ ಯಾವುದೇ ವೈದ್ಯರು ಒಳಪಡಿಸಿದರೆ ಅವರನ್ನು ತಪ್ಪಿತಸ್ಥರು ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಶಿಕ್ಷೆ ಮರುನಿಗದಿಗೊಳಿಸುವ ವೇಳೆ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮಹಿಳೆಯೊಬ್ಬಳು ಈ ಮೊದಲೇ ಲೈಂಗಿಕವಾಗಿ ಸಕ್ರಿಯವಾಗಿದ್ದಾಗ ಆಕೆ ಅತ್ಯಾಚಾರವಾಗಿದೆ ಎಂದು ಆರೋಪ ಮಾಡಿದ ವೇಳೆ ಆಕೆಯ ಆರೋಪವನ್ನು ನಂಬದಿರುವುದು ಕ್ರೌರ್ಯ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ಸಂಕೇತ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಡಿ. ವೈ. ಚಂದ್ರಚೂಡ ಹಾಗೂ ಜಸ್ಟೀಸ್ ಹಿಮಾ ಕೊಹ್ಲಿ ಅವರಿದ್ದ ಪೀಠವು ಈ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಸರ್ಕಾರವು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸುವಂತೆ ಸೂಚಿಸಿದೆ. ಈ ಸಂಬಂಧ ಕಾರ್ಯಾಗಾರಗಳನ್ನು ಸಚಿವಾಲಯ ನಡೆಸಬೇಕು ಮತ್ತು ಎಲ್ಲಾ ರಾಜ್ಯಗಳ ಪೊಲೀಸ್‌ ಮಹಾ ನಿರ್ದೇಶಕರುಗಳಿಗೆ ತನ್ನ ಆದೇಶವನ್ನು ರವಾನಿಸಬೇಕು. ಯಾರೂ ಕೂಡಾ ಅತ್ಯಾಚಾರ ಸಂತ್ರಸ್ತೆಯನ್ನು ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement