ನವದೆಹಲಿ: ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ(Unified Pension Scheme)ಗೆ ಅನುಮೋದನೆ ನೀಡಿದ್ದು, ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.
ಈ ನೂತನ ಏಕೀಕೃತ ಪಿಂಚಣಿ ಯೋಜನೆ (UPS) ಸರ್ಕಾರಿ ನೌಕರರಿಗೆ ಖಚಿತ ಪಿಂಚಣಿ, ಖಚಿತ ಕುಟುಂಬ ಪಿಂಚಣಿ ಮತ್ತು ಖಾತರಿಯ ಕನಿಷ್ಠ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ.
ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವ ಏಕೀಕೃತ ಪಿಂಚಣಿ ಯೋಜನೆ (UPS), ಕನಿಷ್ಠ 25 ವರ್ಷಗಳ ಸೇವೆಯನ್ನು ಹೊಂದಿರುವವರಿಗೆ ನಿವೃತ್ತಿ ದಿನದ ಹಿಂದಿನ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50%ಕ್ಕೆ ಸಮಾನವಾದ ಪಿಂಚಣಿಯನ್ನು ನೀಡುವ ಮೂಲಕ ವರ್ಧಿತ ಆರ್ಥಿಕ ಭದ್ರತೆಯ ಭರವಸೆ ನೀಡುತ್ತದೆ. ಹೆಚ್ಚುವರಿಯಾಗಿ, ಕನಿಷ್ಠ 10 ವರ್ಷಗಳ ಸೇವೆಯ ಬಳಿಕ ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ತಿಂಗಳಿಗೆ ₹ 10,000 ಪಿಂಚಣಿಯ ಭರವಸೆಯನ್ನು ನೀಡುತ್ತದೆ. ಪಿಂಚಣಿದಾರರ ಸಾವಿನ ಬಳಿಕ ಅವರ ಕುಟುಂಬಕ್ಕೆ ಶೇ 60ರಷ್ಟು (ಪಿಂಚಣಿದಾರ ಪಡೆದ ಕೊನೆಯ ತಿಂಗಳ ಪಿಂಚಣಿ ಮೊತ್ತದಲ್ಲಿ) ಕುಟುಂಬ ಪಿಂಚಣಿ ದೊರೆಯಲಿದೆ.
ಈ ಯೋಜನೆಯು ಕೈಗಾರಿಕಾ ಕಾರ್ಮಿಕರಿಗೆ (AICPI-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರ-ಸಂಯೋಜಿತ ಹೆಚ್ಚಳವನ್ನು ಒಳಗೊಂಡಿರುತ್ತದೆ, ಇದು ಖರ್ಚು-ವೆಚ್ಚಗಳು ಹೆಚ್ಚಾಗುತ್ತಿದ್ದರೂ ನಿವೃತ್ತ ನೌಕರರಿಗೆ ಮತ್ತಷ್ಟು ಹಣಕಾಸಿನ ಅನುಕೂಲ ಒದಗಿಸುತ್ತದೆ ಎಂದು ಹೇಳಲಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಎನ್‌ಪಿಎಸ್‌ನಲ್ಲಿ ನೌಕರರು ಶೇ 10ರಷ್ಟು ಕೊಡುಗೆ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಶೇ 14ರಷ್ಟು ಕೊಡುಗೆ ನೀಡುತ್ತಿದೆ. ಯುಪಿಎಸ್‌ನಲ್ಲಿ ಕೇಂದ್ರದ ಕೊಡುಗೆ ಶೇ 18.5ಕ್ಕೆ ಏರಲಿದ್ದು, ನೌಕರರ ಕೊಡುಗೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
ಈ ಯೋಜನೆಯು ಕಾರ್ಯನಿರ್ವಹಣೆ ಹೇಗೆ..? ಅದರ ಪ್ರಯೋಜನಗಳೇನು..?
ಏಕೀಕೃತ ಪಿಂಚಣಿ ಯೋಜನೆ (UPS) ಸರ್ಕಾರಿ ಉದ್ಯೋಗಿಗಳಿಗೆ ಹೊಸ ಪಿಂಚಣಿ ನೀತಿಯಾಗಿದೆ.
ಉದ್ಯೋಗಿಯ ಸರಾಸರಿ ಮೂಲ ವೇತನದ ಆಧಾರದ ಮೇಲೆ ಖಚಿತವಾದ ಪಿಂಚಣಿ ನೀಡುತ್ತದೆ.
ಸಾವಿನ ಸಂದರ್ಭದಲ್ಲಿ ಉದ್ಯೋಗಿಯ ಅವಲಂಬಿತರನ್ನು ಬೆಂಬಲಿಸಲು ಕುಟುಂಬ ಪಿಂಚಣಿಯನ್ನೂ ಒಳಗೊಂಡಿದೆ.
ಯಾವುದೇ ನಿವೃತ್ತ ಉದ್ಯೋಗಿ ತಿಂಗಳಿಗೆ 10,000 ರೂ.ಗಿಂತ ಕಡಿಮೆ ಪಿಂಚಣಿ ಪಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕನಿಷ್ಠ ಪಿಂಚಣಿಯನ್ನೂ ಇದು ಖಾತರಿ ಪಡಿಸುತ್ತದೆ.
ಅದು ಯಾವಾಗ ಪ್ರಾರಂಭವಾಗುತ್ತದೆ?
ಯುಪಿಎಸ್ ಏಪ್ರಿಲ್ 1, 2025 ರಂದು ಜಾರಿಗೆ ಬರಲಿದೆ.
ಪ್ರಮುಖ ಪ್ರಯೋಜನಗಳೇನು?
ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನೌಕರರು ನಿವೃತ್ತಿಯಾಗುವ ಮೊದಲು ನಿವೃತ್ತಿಯ ದಿನದ ಹಿಂದಿನ 12 ತಿಂಗಳುಗಳಲ್ಲಿ ಪಡೆಯುತ್ತಿದ್ದ ಅವರ ಸರಾಸರಿ ಮೂಲ ವೇತನದ 50%ಕ್ಕೆ ಸಮಾನವಾದ ಪಿಂಚಣಿ ಪಡೆಯುತ್ತಾರೆ.
25 ವರ್ಷದೊಳಗಿನವರಿಗೆ, ಪಿಂಚಣಿಯು ಸೇವೆ ಸಲ್ಲಿಸಿದ ವರ್ಷಗಳಿಗೆ ಅನುಗುಣವಾಗಿರುತ್ತದೆ, ಅರ್ಹತೆಗಾಗಿ ಕನಿಷ್ಠ 10 ವರ್ಷಗಳ ಸೇವೆಯ ಅಗತ್ಯವಿರುತ್ತದೆ.
ಖಚಿತ ಕುಟುಂಬ ಪಿಂಚಣಿ: ನೌಕರನ ಮರಣದ ಸಂದರ್ಭದಲ್ಲಿ, ಅವರ ಕುಟುಂಬವು ಅವರ ಕೊನೆಯ ಪಿಂಚಣಿಯ 60% ಮೌಲ್ಯದ ಪಿಂಚಣಿಯನ್ನು ಪಡೆಯುತ್ತದೆ.
ಖಚಿತ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯನ್ನು ಹೊಂದಿರುವ ನಿವೃತ್ತ ನೌಕರರು ಸೇವೆಯ ಸಮಯದಲ್ಲಿ ಅವರ ಗಳಿಕೆಯನ್ನು ಲೆಕ್ಕಿಸದೆ ತಿಂಗಳಿಗೆ ಕನಿಷ್ಠ 10,000 ರೂ.ಪಡೆಯುತ್ತಾರೆ.
ನಿವೃತ್ತಿಯ ವೇಳೆ ಒಟ್ಟು ಮೊತ್ತ ಪಾವತಿ: ಗ್ರಾಚ್ಯುಟಿಯ ಜತೆಗೆ ನಿವೃತ್ತಿ ವೇಳೆಯಲ್ಲಿ ನೌಕರರಿಗೆ ಇಡುಗಂಟು ಸಿಗಲಿದೆ. ನೌಕರ ಪೂರ್ಣಗೊಳಿಸಿದ ಪ್ರತಿ 6 ತಿಂಗಳ ಸೇವೆಗೆ ಅನ್ವಯವಾಗುವಂತೆ ಒಂದು ತಿಂಗಳ (ವೇತನ ಮತ್ತು ತುಟ್ಟಿ ಭತ್ಯೆ ಸೇರಿದಂತೆ) ವೇತನದ 10ನೇ 1 ಭಾಗವನ್ನು ಇದು ಒಳಗೊಂಡಿರುತ್ತದೆ. ಈ ಒಟ್ಟು ಮೊತ್ತವು ಖಚಿತ ಪಿಂಚಣಿ ಮೊತ್ತವನ್ನು ಕಡಿಮೆ ಮಾಡುವುದಿಲ್ಲ, ಪಿಂಚಣಿ ಜೊತೆಗೆ, ನೌಕರರು ನಿವೃತ್ತಿಯ ಸಮಯದಲ್ಲಿ ಒಟ್ಟು ಮೊತ್ತ ಪಡೆಯುತ್ತಾರೆ.
ಹಣದುಬ್ಬರ ರಕ್ಷಣೆ: ಪಿಂಚಣಿಯನ್ನು ಹಣದುಬ್ಬರಕ್ಕೆ ಸೂಚ್ಯಂಕಗೊಳಿಸಲಾಗುತ್ತದೆ, ಇದು ಜೀವನ ನಿರ್ವಹಣೆಯ ಖರ್ಚು ವೆಚ್ಚದೊಂದಿಗೆ ಇದು ಸಹ ಏರಿಕೆಯಾಗುತ್ತದೆ. ಹಣದುಬ್ಬರದೊಂದಿಗೆ (ಡಿಯರ್ನೆಸ್ ರಿಲೀಫ್) ಸೇವೆ ಸಲ್ಲಿಸುವ ನೌಕರರ ವೇತನವು ಹೇಗೆ ಹೆಚ್ಚಾಗುತ್ತದೆಯೇ ಹಾಗೆಯೇ ಇದು ಸಹ ಏರಿಕೆ ಆಗಲಿದೆ.
ಹಿಂದಿನ ನಿವೃತ್ತರ ಬಗ್ಗೆ ಏನು ಹೇಳುತ್ತದೆ…?
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿದ್ದ ಹಿಂದಿನ ನಿವೃತ್ತರು ಯುಪಿಎಸ್‌ಗೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ದರಗಳಲ್ಲಿ ಲೆಕ್ಕಹಾಕಿದ ಬಡ್ಡಿಯೊಂದಿಗೆ ಬಾಕಿಯನ್ನು ಸಹ ಪಡೆಯುತ್ತಾರೆ.
ಕೊಡುಗೆ ಸ್ವರೂಪ : ಏಕೀಕೃತ ಪಿಂಚಣಿ ಯೋಜನೆ (UPS) ಅಡಿಯಲ್ಲಿ ನೌಕರರ ಕೊಡುಗೆ ಈ ಮೊದಲು (ಎನ್‌ಪಿಎಸ್) ನೀಡುತ್ತಿದ್ದ ಶೇ 10ರಷ್ಟೇ ಆಗಿರುತ್ತವೆ. ಆದರೆ ಸರ್ಕಾರದ ಕೊಡುಗೆಯು 14% ರಿಂದ 18.5% ಕ್ಕೆ ಹೆಚ್ಚಾಗುತ್ತದೆ. ಅಂದರೆ ಸರ್ಕಾರದ ಕೊಡುಗೆ 4..5% ರಷ್ಟು ಹೆಚ್ಚಾಗಲಿದೆ.
ಯಾರಿಗೆ ಲಾಭ?
ಸರಿಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರಗಳು ಈ ಹೊಸ ಏಕೀಕೃತ ಪಿಂಚಣಿ ಯೋಜನೆ (UPS) ಸೇರಲು ಬಯಸಿದರೆ, ಈ ಯೋಜನೆಯ ಪ್ರಯೋಜನ ಪಡೆಯುವ ನೌಕರರ ಸಂಖ್ಯೆ 90 ಲಕ್ಷಕ್ಕೆ ಏರಲಿದೆ. ಆಗ, ಆಯಾ ರಾಜ್ಯ ಸರ್ಕಾರಗಳು ಹೆಚ್ಚುವರಿ ಹೊರೆಯನ್ನು ಭರಿಸಬೇಕಾಗುತ್ತದೆ.
ಒಟ್ಟಾರೆಯಾಗಿ, ಏಕೀಕೃತ ಪಿಂಚಣಿ ಯೋಜನೆ ಅಥವಾ ಯುಪಿಎಸ್ ಅನ್ನು ಹಣದುಬ್ಬರದಿಂದ ರಕ್ಷಿಸುವ ಮೂಲಕ ಸ್ಥಿರ ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳನ್ನು ಖಾತರಿಪಡಿಸುವ ಮೂಲಕ ಸರ್ಕಾರಿ ನೌಕರರಿಗೆ ಉತ್ತಮ ಆರ್ಥಿಕ ಭದ್ರತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ಹೊಸ ಯೋಜನೆಯು ಉದ್ಯೋಗಿಗಳಿಗೆ ಎನ್‌ಪಿಎಸ್‌ನೊಂದಿಗೆ ಮುಂದುವರಿಯುವ ಅಥವಾ ಯುಪಿಎಸ್‌ಗೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ, ಆದರೆ ಒಮ್ಮೆ ಮಾಡಿದ ಆಯ್ಕೆಯು ಅಂತಿಮವಾಗಿರುತ್ತದೆ. ಏಪ್ರಿಲ್ 1, 2025 ರ ವೇಳೆಗೆ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರವು ಮುಂದಾಗಿದೆ.
ಹಲವಾರು ಬಿಜೆಪಿಯೇತರ ರಾಜ್ಯಗಳು ಡಿಎ-ಸಂಯೋಜಿತ ಹಳೆಯ ಪಿಂಚಣಿ ಯೋಜನೆಗೆ (OPS) ಹಿಂತಿರುಗಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮತ್ತು ಇತರ ಕೆಲವು ರಾಜ್ಯಗಳಲ್ಲಿನ ಉದ್ಯೋಗಿ ಸಂಸ್ಥೆಗಳು ಇದಕ್ಕೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಬಂದಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ಜನವರಿ 1, 2004 ರಂದು ಅಥವಾ ನಂತರ ಕೇಂದ್ರ ಸರ್ಕಾರಕ್ಕೆ ಸೇರುವ ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ನೌಕರರಿಗೆ ಜಾರಿಗೊಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ