ಮಧ್ಯರಾತ್ರಿ ಮನೆಗಳ ಡೋರ್‌ ಬೆಲ್‌ ಬಾರಿಸುವ ನಿಗೂಢ ಮಹಿಳೆ ; ನಂತರ ಮಾಯ | ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ

ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿಗಳು ನಿಗೂಢ ಮಹಿಳೆಯೊಬ್ಬಳು ತಡರಾತ್ರಿಯಲ್ಲಿ ಭಯಾನಕ ರೀತಿಯಲ್ಲಿ ನಡೆದುಕೊಂಡು ಬಂದು ಮನೆಗಳ ಡೋರ್‌ಬೆಲ್‌ಗಳನ್ನು ಬಾರಿಸಿ ಕಣ್ಮರೆಯಾಗುತ್ತಿರುವುದಕ್ಕೆ ಬೆಚ್ಚಿಬಿದ್ದಿದ್ದಾರೆ.
ಇದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ. ಮಾಧ್ಯಮ ವರದಿಗಳ ಪ್ರಕಾರ, ರಾಜಾ ಮಂಡಿ ಮತ್ತು ಸೋನಾ ಗಾರ್ಡನ್ ಪ್ರದೇಶದಲ್ಲಿ ನಿಗೂಢ ಮಹಿಳೆ ಮಧ್ಯರಾತ್ರಿಯಲ್ಲಿ ಡೋರ್‌ಬೆಲ್‌ಗಳನ್ನು ಬಾರಿಸುವುದು ಮತ್ತು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗುತ್ತಿರುವ ಘಟನೆಗಳು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿವೆ.
ಆಕೆಯ ಸಮ್ಮುಖದಲ್ಲಿ ದನಗಳು ಮತ್ತು ಬೀದಿನಾಯಿಗಳು ವಿಚಿತ್ರವಾಗಿ ಪ್ರತಿಕ್ರಿಯಿಸಿವೆ. ಆಕೆ  ಇದ್ದಕ್ಕಿದ್ದಂತೆ ಪಲಾಯನ ಮಾಡುವುದನ್ನು ಈ ದೃಶ್ಯಾವಳಿಗಳು ತೋರಿಸಿದವು, ಇದು ನಿಗೂಢತೆಯನ್ನು ಹೆಚ್ಚಿಸಿತು.

ಮಹಿಳೆಯು ಸಲ್ವಾರ್-ಕಮೀಜ್ ಧರಿಸಿರುವುದು ಕಂಡುಬಂದಿದ್ದು, ಆಕೆಯ ಮುಖವು ಉದ್ದವಾದ ದುಪಟ್ಟಾದಿಂದ ಮುಚ್ಚಲ್ಪಟ್ಟಿದ್ದರಿಂದ ಅಸ್ಪಷ್ಟವಾಗಿದೆ. ಇದರಿಂದಾಗಿಯೇ ಇದು ಇನ್ನಷ್ಟು ನಿಗೂಢವಾಗಿ ಪರಿಣಮಿಸಿದೆ. ಮನೆಯೊಳಗಿಂದ ಕರೆದರೂ ಆಕೆ ಸ್ಪಂದಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಬೇರೆ ಬೇರೆ ಮನೆಗಳಲ್ಲಿ ಡೋರ್‌ಬೆಲ್‌ ಗುಂಡಿ ಒತ್ತುತ್ತಾ ಸಾಗುತ್ತಾಳೆ.
ಈ ಬಗ್ಗೆ ಯಾವುದೇ ಔಪಚಾರಿಕ ದೂರುಗಳು ದಾಖಲಾಗಿಲ್ಲ, ಆದರೆ ಗಸ್ತು ಹೆಚ್ಚಿಸುವಂತೆ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದು ತಮಾಷೆಯಾಗಿರಬಹುದು ಎಂದು ಕೆಲವರು ನಂಬಿದರೆ, ಇತರರಿಗೆ ಭಯಕ್ಕೆ ಕಾರಣವಾಗಿದೆ. ಯಾವುದೇ ಭಯವನ್ನು ಹೋಗಲಾಡಿಸಲು ಮತ್ತು ಸತ್ಯವನ್ನು ಬಹಿರಂಗಪಡಿಸಲು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವುದಾಗಿ ಪೊಲೀಸ್‌ ಅಧಿಕಾರಿಗಳು ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಇದೇ ರೀತಿಯ ದೂರು ದಾಖಲಾಗಿತ್ತು, ಅಲ್ಲಿ ಮಹಿಳೆಯೊಬ್ಬರು ತಾನು ಮನೆಗಾಗಿ ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಳು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement