ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. 466 ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. 13 ಜನರು ಪ್ರವಾಹದಿಂದ ಮೃತಪಟ್ಟಿದ್ದಾರೆ. ಪರಿಹಾರ ಕೆಲಸಕ್ಕೆ ರಾಜ್ಯ ಸರ್ಕಾರದಿಂದ 510 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಹೇಳಿದ್ದಾರೆ.
ಎನ್ಡಿಆರ್ಎಫ್ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ. 700 ಕೋಟಿಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ತುರ್ತು ಕಾಮಗಾರಿಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮನೆ, ಬೆಳೆ ನಾಶ ಬಗ್ಗೆ 15 ದಿನದಲ್ಲಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮನೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂಪಾಯಿ ಹಾಗೂ ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಪ ಹಾನಿಗೆ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈಗಲೂ ಅದೇ ರೀತಿ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಬಾಕಿ ಪರಿಹಾರ ಹಣ ಬಿಡುಗಡೆ ಮಾಡ್ತೇವೆ ಎಂದುಹೇಳಿರುವ ಬೊಮ್ಮಾಯಿ, ಬೆಳೆ ಹಾನಿ ಸಮೀಕ್ಷೆಗೆ ತಂಡವನ್ನು ಕಳಿಸಲು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೊಮ್ಮಾಯಿ, ನೆರೆ ವಿಚಾರದಲ್ಲಿ ನಮ್ಮ ಸರ್ಕಾರ ಶೀಘ್ರವಾಗಿ ಸ್ಪಂದಿಸಿದೆ. ಅಗತ್ಯ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅವರ ಕಾಲದಲ್ಲಿ ಏನಾಗಿತ್ತು ಎಂದು ನಾನು ಮಾತಾಡಬಹುದು. ಅವರ ಕಾಲದಲ್ಲಿ ಎಷ್ಟು ವಿಳಂಬ ಆಗಿತ್ತು ಎಂಬ ಮಾಹಿತಿ ಇದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಶಾಲೆ ತೆರೆಯುವ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ಬಂದ ಬಳಿಕ ಆ ಬಗ್ಗೆ ಚರ್ಚೆ ಮಾಡುವೆ. ಸೌಹಾರ್ದಯುತವಾಗಿ ನಿರ್ಧಾರ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ನಾಳೆಯಿಂದ 8 ಗಂಟೆಗೆ ಕೆ.ಕೆ. ಗೆಸ್ಟ್ ಹೌಸ್‌ಗೆ ಬರ್ತೇನೆ..:
ಸರ್ಕಾರಿ ನಿವಾಸಕ್ಕೆ ತೆರಳದೆ ಕೆಲಸ ಮಾಡಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ.ಆರ್.ಟಿ. ನಗರ ನಿವಾಸ ಬದಲಿಸದಂತೆ ಬೊಮ್ಮಾಯಿ ಕುಟುಂಬ ಒತ್ತಾಯ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಗೃಹ ಕಚೇರಿ ಕೃಷ್ಣಾ, ಕೆ.ಕೆ.ಗೆಸ್ಟ್ ಹೌಸ್ನಿಂದ ಕೆಲಸ ಮಾಡಲು ಯೋಚಿಸಿದ್ದಾರೆ. ಅತಿಥಿ ಗೃಹದಲ್ಲಿ ಸಾರ್ವಜನಿಕರ ಭೇಟಿ ಬಗ್ಗೆ ಯೋಜಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ನಿವಾಸದ ಬಳಿ ಜಾಗದ ಸಮಸ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಾಳೆಯಿಂದ 8 ಗಂಟೆಗೆ ಕೆ.ಕೆ.ಗೆಸ್ಟ್ ಹೌಸ್‌ಗೆ ಬರುತ್ತೇನೆ. ಕೆ.ಕೆ.ಗೆಸ್ಟ್ ಹೌಸ್‌ನಿಂದಲೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ