ನಿರ್ಗಮನದ ಮಾತುಕತೆಯ ಮಧ್ಯೆ ಯಡಿಯೂರಪ್ಪಗೆ 500 ವೀರಶೈವ- ಲಿಂಗಾಯತ ಸ್ವಾಮೀಜಿಗಳ ಬೆಂಬಲ

ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಿಂದ ಬಂದ 500 ಕ್ಕೂ ಹೆಚ್ಚು ವೀರಶೈವ-ಲಿಂಗಾಯತ ವೀಕ್ಷಕರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಎಂದು ಅಧಿಕಾರ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬಾಲೆಹೋಸೂರ ಮಠದ ದಿಂಗಲೇಶ್ವರ ಸ್ವಾಮಿ, ತಿಪಟೂರಿನ ರುದ್ರಮುನಿ ಸ್ವಾಮಿ ಮತ್ತು ಚಿತ್ರದುರ್ಗದ ಬಸವಕುಮಾರ ಸ್ವಾಮಿ ಅವರು ನೀಡಿದ ಕರೆಯ ಮೇರೆಗೆ, ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶವನ್ನು ಏರ್ಪಡಿಸಿ ಯಡಿಯೂರಪ್ಪ ಪರವಾಗಿ ನಿರ್ಣಯವನ್ನು ಅಂಗೀಕರಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಠಾಧೀಶರ ಮಹಾಸಮಾವೇಶ ನಡೆದಿದ್ದು, ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಈ ಬಗ್ಗೆ ಈ ಸಮಾವೇಶದಲ್ಲಿ ಚರ್ಚಿಸಲಾಗಿದೆ. ಈ ಸಮಾವೇಶ ಬಾಲೆಹೊಸೂರಿನ ಮಠದ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿದೆ. ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಈ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮುರುಘಾ ಶ್ರೀಗಳ ಮಾತು..:
ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಮುರುಘಾ ಶ್ರೀಗಳು ಮಠಗಳಿಗೆ ಅದರದೇ ಆದ ಜವಾಬ್ದಾರಿ ಇರುತ್ತದೆ. ಸಂಕಷ್ಟದ ಕಾಲದಲ್ಲಿ ಮಠಗಳು ಜನರಿಗೆ ನೆರವಾಗಿವೆ. ಮಠಾಧೀಶರು ಎಂದರೆ ಜವಾಬ್ದಾರಿ ವ್ಯಕ್ತಿತ್ವ ಇರುವವರು. ಇದನ್ನು ಅರ್ಥ ಮಾಡಿಕೊಳ್ಳಬೇಕು
ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಕ್ತಾಯ ಆಗಬೇಕಿದೆ. ನಾವು ನಮ್ಮ ಅಹವಾಲನ್ನು ಹೇಳಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವವರು ಬಿಜೆಪಿ ಹೈಕಮಾಂಡ್. ಅವರೇ ಒಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ರಾಜಕಾರಣ, ಮುಖ್ಯಮಂತ್ರಿ ಪದವಿ ಎಲ್ಲವೂ ಸಾರ್ವಜನಿಕರ ಆಸ್ತಿ, ನಮ್ಮ ನಿಮ್ಮೆಲ್ಲರ ಆಸ್ತಿಯಲ್ಲ, ಯಡಿಯೂರಪ್ಪರವರು ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಪರವಾದ ರಾಜಕಾರಣ ಅವರದು. ಹಾಗಾಗಿ ಮಠಾಧೀಶರು ಅವರಿಗೆ ಬೆಂಬಲ ನಿಂತಿದ್ದಾರಷ್ಟೆ. ಸ್ವಾಮಿಗಳೆಲ್ಲ ಜಾತಿವಾದಿಗಳು ಎಂಬ ಭಾವನೆ ತಾಳಬಾರದು, ಮಠಾಧೀಶರು ಜಾತಿಯನ್ನು ಮೀರುವ ಕೆಲಸ ಮಾಡುತ್ತಾರೆ. ೭ ವರ್ಷಗಳ ಹಿಂದೆ ಅಹಿಂದ ಚಳವಳಿ ನಡೆಯಿತು. ಜಾತಿ ಬೇಧ ಮರೆತು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದೆವು. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯತೀತ ನಿಲುವು ಮತ್ತು ರಾಜ್ಯ ಮತ್ತು ಜನರ ಹಿತ ಮುಖ್ಯ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ಮಠಾಧೀಶರು ಸೇರಿಕೊಂಡು ಶಕ್ತಿಯುತ ಸಂಘಟನೆ ಮಾಡಬೇಕಿದೆ. ಇದು ಅನಿವಾರ್ಯ ಕೂಡ ಎಂದು ಅವರು ಹೇಳಿದರು.
ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ
ಈ ಸಮಾವೇಶದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ ಅವರು ಈ ಸಮಾವೇಶ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ, ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಹೈಕಮಾಂಡ್ ವಿರುದ್ಧ ಈ ಸಮಾವೇಶ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪರವರು ಮಠಗಳಿಗೆ ಮೊದಲ ಬಾರಿ ಅನುದಾನ ನೀಡಿದ್ದಾರೆ. ಅವರನ್ನು ಬದಲಾಯಿಸಬಾರದು ಎಂಬ ಭಾವನೆ ಎಲ್ಲ ಸಮುದಾಯದ ಮಠಾಧೀಶರದ್ದಾಗಿದೆ. ಕೆಲವು ಸ್ವಾಮೀಜಿಗಳು ಯಡಿಯೂರಪ್ಪರವರಿಗೆ ಮನೋಸ್ಥೈರ್ಯ ತುಂಬಲು ಅವರಿಗೆ ಆರ್ಶೀವಾದ ಮಾಡಲು ಹೋಗಿದ್ದರು ಎಂದರು.
ಮಠಾಧೀಶರು ಶಕ್ತಿ ಪ್ರದರ್ಶನಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಈ ಸಮಾವೇಶವನ್ನು ಯಡಿಯೂರಪ್ಪ ಹಾಗೂ ಅವರ ಪುತ್ರ ಅಯೋಜನೆ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ದೇವರ ಸಾಕ್ಷಿಯಾಗಿ ಸತ್ಯವನ್ನೇ ಹೇಳುತ್ತಿದ್ದೇನೆ. ಮಠಾಧಿಪತಿಗಳೇ ಸಮಾವೇಶ ಮಾಡುತ್ತಿರುವುದು ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸ್ಥಾಪನೆಯಾಗುವ ಮೊದಲೇ ಮಠಗಳು ಅಸ್ತಿತ್ವದಲ್ಲಿವೆ. ನೂರಾರು ವರ್ಷಗಳಿಂದ ಮಠಗಳಿವೆ, ಬಾಲಗಂಗಾಧರ ತಿಲಕರು ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳು ಮಠಾಧೀಶರು ಆರ್ಶೀವಾದ ಪಡೆಯುತ್ತಿದ್ದರು. ಯಾವುದೇ ಪಕ್ಷದ ನಾಯಕನಿಗೆ ಸಂಸ್ಕಾರ ಇದ್ದರೆ ಮಠಾಧೀಶರಿಗೆ ಗೌರವ ನೀಡುತ್ತಾರೆ. ಅಂತಹ ಸಂಸ್ಕಾರ ಇರುವ ವ್ಯಕ್ತಿಗಳು ಎಲ್ಲ ಪಕ್ಷದಲ್ಲೂ ಇದ್ದಾರೆ. ಆದರೆ, ಇತ್ತೀಚೆಗೆ ಮಠಾಧೀಶರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಯಡಿಯೂರಪ್ಪರವು ಇಳಿ ವಯಸ್ಸಿನಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆ.ಮಠ-ಮಾನ್ಯಗಳಿಗೆ ಅನುದಾನ ನೀಡಿ ಮೇಲ್ಪಂಕ್ತಿ ಹಾಕಿದ್ದಾರೆ.ಅವರು ಜಾತ್ಯತೀತ ನಾಯಕರು, ಅವರನ್ನು ಬೆಂಬಲಿಸಿದ್ದೇವೆ ಎಂದ ಅವರು, ಮಠಾಧೀಶರು ಎಂದೂ ಅನುದಾನಕ್ಕೆ ಕೈ ಚಾಚಿದವರಲ್ಲ ಎಂದರು.
ಯಡಿಯೂರಪ್ಪರವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡಿದಂತೆ, ಯಡಿಯೂರಪ್ಪರವರು ಕಟ್ಟಿದ ಮನೆಯಲ್ಲಿ ಯಾರೋ ವಾಸಮಾಡುವುದು ಸರಿಯಲ್ಲ ಎಂದವರು ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು.
ವಯಸ್ಸಿನ ಕಾರಣ ನೀಡಿ ನಾಯಕತ್ವ ಬದಲಾವಣೆ ಸಲ್ಲ..:
ಇದೇ ಸಂದರ್ಭದಲ್ಲಿ ಮಾತನಾಡಿದ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಯಡಿಯೂರಪ್ಪರವರು ಕೇವಲ ಲಿಂಗಾಯತ ನಾಯಕರಲ್ಲ, ಸರ್ವ ಜನಾಂಗದ ಪ್ರೀತಿ ಗಳಿಸಿರುವ ನಾಯಕ, ಅವರಿಗೆ ವಯಸ್ಸಾಗಿದೆ ಎಂಬ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ. ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕು ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement