
ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಹೇಳಿದ್ದು, ವಿಪಕ್ಷಗಳ ಮೈತ್ರಿಕೂಟದ ಭಾಗವಾಗಿ ಉಳಿದಿಲ್ಲ ಎಂದು ಹೇಳಿದೆ. ಅಲ್ಲದೆ ಇಂಡಿಯಾ ಬ್ಲಾಕ್ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಅದು ಪ್ರಶ್ನಿಸಿದೆ.
ದೇಶದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಶನಿವಾರ (ಜುಲೈ ೧೯) ಸಂಜೆ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರ ಆನ್‌ಲೈನ್ ಸಭೆಗೆ ಮುಂಚಿತವಾಗಿ ಎಎಪಿ ರಾಜ್ಯಸಭಾ ಸಂಸದ ಸಂಜಯ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಈ ಸಭೆ ನಡೆಯುತ್ತಿದೆ. ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷಗಳು ಕೊನೆಯ ಬಾರಿಗೆ ದೇಶದ ರಾಜಕೀಯ ಪರಿಸ್ಥಿತಿಯನ್ನು ಜಂಟಿಯಾಗಿ ಚರ್ಚಿಸಿದ ನಂತರ ಬಹಳ ಸಮಯದ ನಂತರ ಈ ಸಭೆ ನಡೆಯಲಿದೆ.

“ಆಪ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇಂಡಿಯಾ ಬಣವು (2024) ಲೋಕಸಭಾ ಚುನಾವಣೆಗೆ ಇತ್ತು. ನಾವು ದೆಹಲಿ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿಯಾಗಿ ಹೋರಾಡಿದ್ದೇವೆ. ಬಿಹಾರ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಹೋರಾಡಲಿದ್ದೇವೆ. ಪಂಜಾಬ್ ಮತ್ತು ಗುಜರಾತಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ನಾವು ಏಕಾಂಗಿಯಾಗಿ ಹೋರಾಡಿದ್ದೇವೆ. ಎಎಪಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಲ್ಲ. ನಾವು ಲೋಕಸಭೆಯಲ್ಲಿ ಸಮಸ್ಯೆಗಳನ್ನು ಬಲವಾಗಿ ಎತ್ತುತ್ತೇವೆ. ನಾವು ಯಾವಾಗಲೂ ಪ್ರಬಲ ವಿಪಕ್ಷದ ಪಾತ್ರವನ್ನು ವಹಿಸಿದ್ದೇವೆ” ಎಂದು ಸಂಜಯ ಸಿಂಗ್ ತಿಳಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ದೆಹಲಿ ಮತ್ತು ಹರಿಯಾಣದಲ್ಲಿ ಸ್ಪರ್ಧಿಸಿತ್ತು..
ಕಾಂಗ್ರೆಸ್ ಅನ್ನು ಟೀಕಿಸಿದ ಸಂಜಯ ಸಿಂಗ್, ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸುವಲ್ಲಿ ಅದರ ಪಾತ್ರವನ್ನು ಪ್ರಶ್ನಿಸಿದರು.”ಇದು ಮಕ್ಕಳ ಆಟವಲ್ಲ. ಲೋಕಸಭಾ ಚುನಾವಣೆಯ ನಂತರ ಅವರು ಯಾವುದೇ ಸಭೆ ನಡೆಸಿದ್ದಾರೆಯೇ? ಇಂಡಿಯಾ ಮೈತ್ರಿಕೂಟವನ್ನು ವಿಸ್ತರಿಸಲು ಯಾವುದೇ ಉಪಕ್ರಮವಿದೆಯೇ? ಕೆಲವೊಮ್ಮೆ ಅವರು ಅಖಿಲೇಶ ಯಾದವ್, ಕೆಲವೊಮ್ಮೆ ಉದ್ಧವ್ ಠಾಕ್ರೆ ಮತ್ತು ಕೆಲವೊಮ್ಮೆ ಮಮತಾ ಬ್ಯಾನರ್ಜಿಯನ್ನು ಟೀಕಿಸುತ್ತಾರೆ. ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿರಬೇಕು. ಕಾಂಗ್ರೆಸ್ ಬಣದ ಅತಿದೊಡ್ಡ ಪಕ್ಷ. ಆದರೆ ಅದು (ವಿಪಕ್ಷಗಳ ಏಕತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ) ಪಾತ್ರ ವಹಿಸಿದೆಯೇ?” ಎಂದು ಅವರು ಪ್ರಶ್ನಿಸಿದರು.
ಸರ್ಕಾರವನ್ನು ವಿರೋಧಿಸುವಲ್ಲಿ ಎಎಪಿಯ ಪಾತ್ರದ ಕುರಿತು ಮಾತನಾಡಿದ ಅವರು, ಪಕ್ಷವು ಯಾವಾಗಲೂ ಆಡಳಿತ ಪಕ್ಷವನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದೆ ಎಂದು ಹೇಳಿದರು. “ನಾವು ಅದನ್ನು ಪೂರ್ಣ ಶಕ್ತಿಯಿಂದ ಮಾಡುತ್ತೇವೆ. ಇಂಡಿಯಾ ಬ್ಲಾಕ್ ಏನು ಬೇಕಾದರೂ ಮಾಡಬಹುದು” ಎಂದು ಅವರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ