ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ದರೋಡೆಗೆ ಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಸುಂಕಸಾಳದ ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಶೌಚಾಲಯದ ಗೋಡೆಗೆ ಕನ್ನ ಕೊರೆದು ಒಳನುಗ್ಗಿ ದರೋಡೆಗೆ ಯತ್ನ ನಡೆಸಲಾಗಿತ್ತು. ಆರೋಪಿತರು ಬ್ಯಾಂಕಿನ ಸ್ಟ್ರಾಂಗ್ ರೂಮ್ ಗೋಡೆಯನ್ನು ಸಹ ಒಡೆಯುವ ಪ್ರಯತ್ನ ನಡೆಸಲಾಗಿತ್ತು. ಶಾಖಾ ವ್ಯವಸ್ಥಾಪಕರು ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಾಲೂಕಿನ ಹಳವಳ್ಳಿ ನಿವಾಸಿ ವಿನಾಯಕ ಕಮಲಾಕರ ಸಿದ್ಧಿ(19), ಮಗ್ಗದ ಮನೆ ನಿವಾಸಿ ರಾಜೇಶ ಲಕ್ಷ್ಮಣ ಸಿದ್ಧಿ(27), ಮಳಲಗಾವ ನಿವಾಸಿ ಪ್ರಶಾಂತ ಅನಂತ ಸಿದ್ಧಿ(19) ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ಧಿ(38) ಮತ್ತು ನಾಗೇಶ ಸುಬ್ರಾಯ ಸಿದ್ಧಿ(24) ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಹೆಗ್ಗಾರದ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ಕಳ್ಳತನ, ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್ ಕಿರಾಣಿ ಅಂಗಡಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
ಆರೋಪಿತರಿಂದ ಕಳ್ಳತನಕ್ಕೆ ಬಳಸಿದ್ದ ಹೀರೋ ಕಂಪನಿಯ ಎರಡು ಬೈಕ್, ಬಜಾಜ ಕಂಪನಿಯ ಒಂದು ಬೈಕ್ ಸೇರಿದಂತೆ ಒಟ್ಟು ಮೂರು ಬೈಕುಗಳು, ಏಸರ್ ಕಂಪನಿಯ ಟ್ಯಾಬ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ,
ಡಿ.ವೈ.ಎಸ್.ಪಿ ಗಿರೀಶ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿ.ಎಸ್.ಐ ವಿಶ್ವನಾಥ ನಿಂಗೊಳ್ಳಿ, ಗುರುನಾಥ ಹಾದಿಮನಿ ಮತ್ತು ಅಂಕೋಲಾ ಠಾಣೆಯ ಸಿಬ್ಬಂದಿ ತಂಡವು ಯಲ್ಲಾಪುರ ಠಾಣೆಯ ಸಿಬ್ಬಂದಿ ಸಹಕಾರದಲ್ಲಿ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ