ಕಮಲ ಹಾಸನ್ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನ: 50 ಸಾವಿರ ರೂ. ವಾಪಸ್‌ ನೀಡಲು ಒತ್ತಾಯ

ಚೆನ್ನೈ: ನಟ ಹಾಗೂ  ರಾಜ್ಯಸಭಾ ಸಂಸದ ಕಮಲ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’ (MNM) ಪಕ್ಷವು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಈ ದಿಢೀರ್ ಬೆಳವಣಿಗೆಯು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಚುನಾವಣೆಗೆ ಮುನ್ನ ಅಭ್ಯರ್ಥಿಗಳ ಆಯ್ಕೆಗಾಗಿ  ‘ಮಕ್ಕಳ್ ನೀಧಿ ಮೈಯಂ’ (MNM) ಪಕ್ಷವು  ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ಈ ಅರ್ಜಿಗಾಗಿ ತಲಾ 50,000 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ರಾಜ್ಯದ ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಇದು ಅತ್ಯಂತ ದುಬಾರಿ ಮೊತ್ತ ಎಂದು ಕಾರ್ಯಕರ್ತರು ದೂರಿದ್ದಾರೆ.
ಇಷ್ಟೊಂದು ದುಬಾರಿ ಶುಲ್ಕವಿದ್ದರೂ, ಕೊಯಮತ್ತೂರಿನ 8 ಮಂದಿ ಸೇರಿದಂತೆ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಅಭ್ಯರ್ಥಿಗಳು ಪಕ್ಷದ ಟಿಕೆಟ್ ಸಿಗುವ ಭರವಸೆಯಿಂದ ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಪಕ್ಷವು ಈಗ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವುದು ಅರ್ಜಿದಾರರನ್ನು ಹತಾಶೆಗೊಳಿಸಿದೆ.
“ಚುನಾವಣೆಯನ್ನೇ ಎದುರಿಸದೇ ಇದ್ದರೆ ರಾಜಕೀಯ ಪಕ್ಷ ನಡೆಸಿ ಏನು ಪ್ರಯೋಜನ?” ಎಂದು ಅನಾಮಧೇಯ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಯ ಭಾಗವಾಗಿದ್ದ ಎಂಎನ್‌ಎಂ (MNM) ಕಳೆದ ಬಾರಿಯ ಉತ್ತಮ ಪ್ರದರ್ಶನದ ಆಧಾರದ ಮೇಲೆ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಹೊಂದಿತ್ತು. ಆದರೆ ಈಗಿನ ನಿರ್ಧಾರವು ಕಾರ್ಯಕರ್ತರ ಶ್ರಮವನ್ನು ವ್ಯರ್ಥಗೊಳಿಸಿದೆ ಎಂಬ ಭಾವನೆ ಮೂಡಿಸಿದೆ.
ಹಣ ವಾಪಸ್ ನೀಡಲು ಆಗ್ರಹ
ಪಕ್ಷವು ಸ್ಪರ್ಧಿಸದೇ ಇರುವ ನಿರ್ಧಾರತೆಗೆದುಕೊಂಡ ಮೇಲೆ ಸಂಗ್ರಹಿಸಿದ ಅರ್ಜಿ ಶುಲ್ಕವನ್ನು ಕೂಡಲೇ ಹಿಂತಿರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. “ಸ್ಪರ್ಧಿಸುವ ಉದ್ದೇಶವಿಲ್ಲದಿದ್ದರೆ ಅಷ್ಟು ದೊಡ್ಡ ಮೊತ್ತವನ್ನು ಏಕೆ ವಸೂಲಿ ಮಾಡಬೇಕಿತ್ತು?” ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ವಿಶೇಷವೆಂದರೆ, ರಾಜ್ಯ ಉಪಾಧ್ಯಕ್ಷ ಆರ್. ತಂಗವೇಲು ಅವರ ಪರವಾಗಿಯೂ ಕೆಲವು ಕಾರ್ಯಕರ್ತರು ಹಣ ಪಾವತಿಸಿ ಅರ್ಜಿ ಸಲ್ಲಿಸಿದ್ದರು.
 ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುವುದಾಗಿ ಬಂದ ಕಮಲ ಹಾಸನ್ ಅವರ ಪಕ್ಷ, ಈಗ ಆಂತರಿಕ ಭಿನ್ನಮತ ಮತ್ತು ಹಣಕಾಸಿನ ವಿವಾದಕ್ಕೆ ಸಿಲುಕಿರುವುದು ತಮಿಳುನಾಡು ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement