ಸ್ವತಂತ್ರ ಭಾರತದಲ್ಲಿ ರಾಜೀನಾಮೆ ನೀಡಿದ ಕೇಂದ್ರ ಸಚಿವರು ; ರಾಜೀನಾಮೆ ನೀಡಿದ್ದು ಯಾವ ಕಾರಣಕ್ಕೆ…?

ನವದೆಹಲಿ : ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ವಾರಗಳಿಂದ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ನಂತರ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ಜುಲೈ 25ರಂದು ರಾಜೀನಾಮೆ ನೀಡಿದ್ದಾರೆ.
ದೇಶದ ಅತ್ಯಂತ ಮಹತ್ವದ ಪ್ರವೇಶ ಪರೀಕ್ಷೆಗಳಲ್ಲೊಂದಾದ ನೀಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಬೆಂಬಲ ಸೂಚಿಸಿ, ವಿದ್ಯಾರ್ಥಿಗಳ ಬೆಂಬಲ ಪಡೆದ ಕಾಕ್ರೋಚ್‌ ಜನತಾ ಪಾರ್ಟಿ (CJP) ಜೊತೆಗೆ ಸೇರಿದ್ದರು. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಾಂಗ್ಚುಕ್ ನಡೆಸಿದ 26 ದಿನಗಳ ಉಪವಾಸ ಸತ್ಯಾಗ್ರಹ ಪ್ರತಿಭಟನೆಯ ಪ್ರಮುಖ ಕೇಂದ್ರಬಿಂದುವಾಗಿ ಪರಿಣಮಿಸಿತು.ನಿರಂತರ ಸಾರ್ವಜನಿಕ ಒತ್ತಡದ ನಡುವೆ ಶನಿವಾರ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಬೆಳವಣಿಗೆ ಭಾರತದಲ್ಲಿ ರಾಜಕೀಯ ಹೊಣೆಗಾರಿಕೆ ಹಾಗೂ ಸಚಿವರ ನೈತಿಕ ಜವಾಬ್ದಾರಿಯ ಕುರಿತು ಮತ್ತೊಮ್ಮೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ಭಿನ್ನಾಭಿಪ್ರಾಯದ ಕಾರಣಗಳಿಗೆ ಡಾ. ಶ್ಯಾಮ ಪ್ರಸಾದ ಮುಖರ್ಜಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನೆಹರು ಸಂಪುಟದಿಂದ  ಹೊರಬಂದಿದ್ದರು.
ಡಾ. ಶ್ಯಾಮ ಪ್ರಸಾದ ಮುಖರ್ಜಿ ರಾಜೀನಾಮೆ ನೀಡಲು ಕಾರಣ ನೆಹರೂ-ಲಿಯಾಕತ್ ಒಪ್ಪಂದ. ಈ ಒಪ್ಪಂದಕ್ಕೆ ಏಪ್ರಿಲ್ 1950 ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಸಹಿ ಹಾಕಿದರು. ಎರಡೂ ದೇಶಗಳಲ್ಲಿ ವಾಸಿಸುವ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ವಿಭಜನೆಯಿಂದ ಉಂಟಾಗುವ ಉದ್ವಿಗ್ನತೆಯನ್ನು ನಿವಾರಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು.
ಡಾ. ಶ್ಯಾಮ ಪ್ರಸಾದ ಮುಖರ್ಜಿ ಈ ಒಪ್ಪಂದವನ್ನು ಸಂಪೂರ್ಣವಾಗಿ ಒಪ್ಪಲಿಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ದೃಢವಾದ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ನಂಬಿದ್ದರು. ಅವರು ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಮಂಡಿಸಿದರು, ಆದರೆ ಅವುಗಳನ್ನು ಸ್ವೀಕರಿಸದಿದ್ದಾಗ, ಅವರು ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು.
ಡಾ. ಬಿ.ಆರ್. ಅಂಬೇಡ್ಕರ
ಡಾ. ಶ್ಯಾಮಪ್ರಸಾದ ಮುಖರ್ಜಿ ನಂತರ, ಮತ್ತೊಬ್ಬ ಪ್ರಮುಖ ರಾಷ್ಟ್ರೀಯ ನಾಯಕ ಡಾ. ಬಿ.ಆರ್‌. ಅಂಬೇಡ್ಕರ್ ಕೂಡ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು ಮತ್ತು ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. 1951 ರಲ್ಲಿ ಅವರು ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿದರು.
ಅವರ ರಾಜೀನಾಮೆಗೆ ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಪ್ರಮುಖವಾದದ್ದು ಹಿಂದೂ ಸಂಹಿತೆ ಮಸೂದೆಯ ಬಗ್ಗೆ ಸರ್ಕಾರದ ನಿಲುವು. ಡಾ. ಅಂಬೇಡ್ಕರ್ ಅವರು ಆಸ್ತಿ, ಮದುವೆ ಮತ್ತು ಉತ್ತರಾಧಿಕಾರದ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಬೇಕೆಂದು ಪ್ರತಿಪಾದಿಸಿದರು; ಆದಾಗ್ಯೂ, ಹಿಂದೂ ಸಂಹಿತೆ ಮಸೂದೆಗೆ ಸಾಕಷ್ಟು ಬೆಂಬಲ ಮತ್ತು ಆದ್ಯತೆ ನೀಡದಿರುವ ಬಗ್ಗೆ ಅವರು ಅತೃಪ್ತರಾಗಿದ್ದರು. ಅಂತಿಮವಾಗಿ, ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
ನೆಗಳು ಅಪರೂಪವಾಗಿದ್ದರೂ, ಕೆಲವು ಮಹತ್ವದ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ.

ಲಾಲ ಬಹದ್ದೂರ ಶಾಸ್ತ್ರಿ
1956ರಲ್ಲಿ ತಮಿಳುನಾಡಿನ ಅರಿಯಲೂರು ರೈಲು ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಅಂದು ರೈಲ್ವೆ ಸಚಿವರಾಗಿದ್ದ ಲಾಲ ಬಹದ್ದೂರ ಶಾಸ್ತ್ರಿ ಅವರು ನೈತಿಕ ಹೊಣೆ ಹೊತ್ತು ನವೆಂಬರ್ 25, 1956ರಂದು ರಾಜೀನಾಮೆ ಸಲ್ಲಿಸಿದ್ದರು. ಪ್ರಧಾನಿ ಜವಾಹರಲಾಲ ನೆಹರು ಆರಂಭದಲ್ಲಿ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದರೂ, ಶಾಸ್ತ್ರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ತಮ್ಮ ಹುದ್ದೆ ತೊರೆದರು. ಲಾಲ ಬಹಾದ್ದೂರ ಶಾಸ್ತ್ರೀ ಅವರ ರಾಜಿಣಾಮೆಯು ಭಾರತದ ರಾಜಕೀಯ ಇತಿಹಾಸದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಮೊದಲ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಟಿ.ಟಿ. ಕೃಷ್ಣಮಾಚಾರಿ
ಮುನ್ಧ್ರಾ ಹಗರಣದ ಹಿನ್ನೆಲೆಯಲ್ಲಿ ಟಿ.ಟಿ. ಕೃಷ್ಣಮಾಚಾರಿ ಅವರು ಫೆಬ್ರವರಿ 1958ರಲ್ಲಿ ಕೇಂದ್ರ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸೆಪ್ಟೆಂಬರ್ 1963ರಲ್ಲಿ ಮತ್ತೆ ಹಣಕಾಸು ಸಚಿವರಾಗಿ ಮರಳಿದ ಅವರು, ತಮ್ಮ ವಿರುದ್ಧದ ಪಕ್ಷಪಾತದ ಆರೋಪಗಳ ಕುರಿತು ಪ್ರಧಾನಿಯವರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಅನೌಪಚಾರಿಕ ತನಿಖೆ ನಡೆಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ 1965ರಲ್ಲಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಪಾಟ್ನಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ; ಲಾಲುಪ್ರಸಾದ ಪುತ್ರ ತೇಜ್ ಪ್ರತಾಪ ಯಾದವ್ ಬಂಧನ

ವಿ.ಕೆ. ಕೃಷ್ಣ ಮೆನನ್
1962ರ ಭಾರತ-ಚೀನಾ ಯುದ್ಧದಲ್ಲಿ ಭಾರತದ ಸೋಲಿನ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದ ಭಾರತದ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರು ನವೆಂಬರ್ 9, 1962ರಂದು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾರ್ವಜನಿಕ ಆಕ್ರೋಶದ ನಡುವೆ ಪ್ರಧಾನಿ ನೆಹರು ಅವರನ್ನು ರಕ್ಷಣಾ ಖಾತೆಯಿಂದ ತೆರವುಗೊಳಿಸಿ, ರಕ್ಷಣಾ ಉತ್ಪಾದನಾ ಜವಾಬ್ದಾರಿಯನ್ನು ಮಾತ್ರ ಉಳಿಸಿದ್ದರು. ಅವರ ರಾಜೀನಾಮೆಯನ್ನು ಭಾರತದ ಸೈನಿಕ ಸಿದ್ಧತೆಯ ಕೊರತೆಯ ಹೊಣೆಗಾರಿಕೆಯ ಸಂಕೇತವೆಂದು ಪರಿಗಣಿಸಲಾಯಿತು.
ವಿ.ಪಿ. ಸಿಂಗ್
1987ರಲ್ಲಿ ರಕ್ಷಣಾ ಸಚಿವರಾಗಿದ್ದ ವೇಳೆ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದದಲ್ಲಿ ಕಮಿಷನ್ ಪಾವತಿ ಆರೋಪಗಳ ತನಿಖೆ ಆರಂಭವಾದ ಹಿನ್ನೆಲೆಯಲ್ಲಿ ವಿ.ಪಿ. ಸಿಂಗ್ ರಾಜೀನಾಮೆ ನೀಡಿದ್ದರು. ನಂತರ ನವೆಂಬರ್ 7, 1990ರಂದು, ತಮ್ಮ ಅಲ್ಪಮತದ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಪ್ರಧಾನಮಂತ್ರಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.

ಪಿ.ಚಿದಂಬರಂ
ಜುಲೈ 1992 ರಲ್ಲಿ ವಾಣಿಜ್ಯ ಸಚಿವ ಪಿ ಚಿದಂಬರಂ ಅವರು ಮತ್ತು ಅವರ ಪತ್ನಿ ಆ ವರ್ಷದ ಸೆಕ್ಯುರಿಟೀಸ್ ಹಗರಣದಲ್ಲಿ ಕಳಂಕಿತ ಕಂಪನಿಯಾದ ಫೇರ್‌ಗ್ರೋತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ 15,000 ಪ್ರವರ್ತಕರ ಕೋಟಾ ಷೇರುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ ನಂತರ ರಾಜೀನಾಮೆ ನೀಡಿದರು. ಪ್ರಧಾನಿ ಪಿ.ವಿ. ನರಸಿಂಹ ರಾವ್ ರಾಜೀನಾಮೆಯನ್ನು ಅಂಗೀಕರಿಸಿದ್ದರು.
ವೀರಭದ್ರ ಸಿಂಗ್
1989 ರಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಶಿಮ್ಲಾ ನ್ಯಾಯಾಲಯವು ಅವರ ಮತ್ತು ಅವರ ಪತ್ನಿ ಪ್ರತಿಭಾ ಸಿಂಗ್ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಿದ ಒಂದು ದಿನದ ನಂತರ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ವೀರಭದ್ರ ಸಿಂಗ್ ಜೂನ್ 2012 ರಲ್ಲಿ ರಾಜೀನಾಮೆ ನೀಡಿದರು. ಸಿಂಗ್ ತಮ್ಮ ರಾಜೀನಾಮೆಯನ್ನು ಅವರ “ನೈತಿಕ ಕರ್ತವ್ಯ” ಎಂದು ಬಣ್ಣಿಸಿದರು. ವಿಶೇಷ ನ್ಯಾಯಾಧೀಶರು ಆ ವರ್ಷದ ಡಿಸೆಂಬರ್‌ನಲ್ಲಿ ಅವರನ್ನು ಆರೋಪದಿಂದ ಮುಕ್ತಗೊಳಿಸಿದರು. ಖುಲಾಸೆಗೊಳಿಸಿದರು.

ಮಾಧವರಾವ್ ಸಿಂಧಿಯಾ
ಮಾಧವರಾವ್ ಸಿಂಧಿಯಾ ಅವರು ಎರಡು ಬಾರಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊದಲ ಬಾರಿ ಜನವರಿ 1993ರಲ್ಲಿ, ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಗುತ್ತಿಗೆ ಆಧಾರಿತ ರಷ್ಯಾದ ಟು-154 ವಿಮಾನ ಪತನದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ನಂತರ ಜನವರಿ 1996ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಹವಾಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹುದ್ದೆ ತೊರೆದಿದ್ದರು.
ನಿತೀಶಕುಮಾರ
ಆಗಸ್ಟ್ 1999ರಲ್ಲಿ, ಪಶ್ಚಿಮ ಬಂಗಾಳದ ಗೈಸಾಲ್ ರೈಲು ಅಪಘಾತದಲ್ಲಿ ಸುಮಾರು 290 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಆಗ ರೈಲ್ವೆ ಸಚಿವರಾಗಿದ್ದ ನಿತೀಶಕುಮಾರ ಅವರು ನೈತಿಕ ಹೊಣೆ ಹೊತ್ತು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ಅಂಗೀಕಾರಗೊಂಡಿತ್ತು, ರೈಲು ದುರಂತದ ಹೊಣೆ ಹೊತ್ತು ಹುದ್ದೆ ತೊರೆದ ಅಪರೂಪದ ಕೇಂದ್ರ ಸಚಿವರಲ್ಲಿ ನಿತೀಶ ಅವರು ಒಬ್ಬರಾಗಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ ಪ್ರಕರಣ: ಸುಪ್ರೀಂ ಕೋರ್ಟ್‌ ಆದೇಶದಂತೆ ಎಸ್‌ಐಟಿ ಪುನರ್ರಚನೆ

ಶಿವರಾಜ ಪಾಟೀಲ್
2008ರ ಮುಂಬೈ 26/11 ಉಗ್ರ ದಾಳಿಯ ವೇಳೆ ಭದ್ರತಾ ವೈಫಲ್ಯಗಳ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಶಿವರಾಜ ಪಾಟೀಲ್ ರಾಜೀನಾಮೆ ನೀಡಿದ್ದರು. ಅದಕ್ಕೂ ಮೊದಲು, ದೆಹಲಿ ಸರಣಿ ಸ್ಫೋಟಗಳ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವ ಮೊದಲು ಮೂರು ಬಾರಿ ಉಡುಪು ಬದಲಾಯಿಸಿದ್ದಕ್ಕಾಗಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಎರಡು ತಿಂಗಳ ಬಳಿಕ ಅವರು ನೈತಿಕ ಹೊಣೆಗಾರಿಕೆಯನ್ನು ಉಲ್ಲೇಖಿಸಿ ರಾಜೀನಾಮೆ ಸಲ್ಲಿಸಿದ್ದರು.
ಎ. ರಾಜಾ
2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಎ. ರಾಜಾ ರಾಜೀನಾಮೆ ನೀಡಿದ್ದರು. ಆದರೆ ತಾನು ಹಿಂದಿನ ನೀತಿಯನ್ನೇ ಮುಂದುವರಿಸಿದ್ದೇನೆಯೇ ಹೊರತು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದರು.

ದಯಾನಿಧಿ ಮಾರನ್
2011ರಲ್ಲಿ ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು. ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ದೂರಸಂಪರ್ಕ ಉದ್ಯಮಿ ಸಿ. ಶಿವಶಂಕರನ್ ಅವರಿಗೆ ತಮ್ಮ ಏರ್‌ಸೆಲ್ ಪಾಲನ್ನು ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಸಂಸ್ಥೆಗೆ ಮಾರುವಂತೆ ಒತ್ತಡ ಹೇರಿದ್ದರೆಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ನಂತರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪವನಕುಮಾರ ಬನ್ಸಲ್
2013ರಲ್ಲಿ ರೈಲ್ವೆ ಸಚಿವ ಪವನಕುಮಾರ ಬನ್ಸಲ್ ಅವರ ಸೋದರಳಿಯ ವಿಜಯ ಸಿಂಗ್ಲಾ ಅವರು ರೈಲ್ವೆ ಮಂಡಳಿಯ ಸದಸ್ಯರೊಬ್ಬರಿಂದ ಲ್ಯಾಟರಲ್ ಪದೋನ್ನತಿಗೆ ನೆರವಾಗುವುದಾಗಿ ಹೇಳಿ ಲಂಚ ಪಡೆದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬನ್ಸಲ್ ರಾಜೀನಾಮೆ ನೀಡಿದ್ದರು. ಈ ಪ್ರಕರಣ ರೈಲ್ವೆ ಇಲಾಖೆಯ ಅತ್ಯಂತ ಚರ್ಚಿತ ಲಂಚ ಹಗರಣಗಳಲ್ಲಿ ಒಂದಾಗಿ ಪರಿಣಮಿಸಿತು.

ಅಶ್ವಿನಿ ಕುಮಾರ

ಕಲ್ಲಿದ್ದಲು ಗಣಿ ಹಂಚಿಕೆ (ಕೋಲ್‌ಗೇಟ್) ಪ್ರಕರಣದ ತನಿಖೆ ನಿರ್ವಹಣೆಯಲ್ಲಿ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದ ನಂತರ, ಕೇಂದ್ರ ಕಾನೂನು ಸಚಿವ ಅಶ್ವಿನಿಕುಮಾರ ಅವರು ಮೇ 2013ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಈ ವಿವಾದ ಅಪಘಾತಕ್ಕೆ ಸಂಬಂಧಿಸದಿದ್ದರೂ, ಅವರು ರಾಜೀನಾಮೆಯನ್ನು ನೈತಿಕ ಹೊಣೆಗಾರಿಕೆಯ ಕ್ರಮವೆಂದು ಬಿಂಬಿಸಲಾಯಿತು.
ಎಂ.ಜೆ. ಅಕ್ಬರ್
2018ರ ಅಕ್ಟೋಬರ್‌ನಲ್ಲಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಮಾಜಿ ಮಹಿಳಾ ಸಹೋದ್ಯೋಗಿಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಈ ಆರೋಪಗಳನ್ನು ಮೊದಲಿಗೆ ಪತ್ರಕರ್ತೆ ಪ್ರಿಯಾ ರಮಣಿ ಸಾರ್ವಜನಿಕಗೊಳಿಸಿದ್ದರು. ಬಳಿಕ ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಮಾನಹಾನಿ ಮೊಕದ್ದಮೆ ಹೂಡುವ ಉದ್ದೇಶದಿಂದ ಅಕ್ಬರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement