ಬೆಂಗಳೂರು | ಬಾಲಕನ ಅಪಹರಿಸಿ ಬರ್ಬರ ಹತ್ಯೆ : ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ

ಬೆಂಗಳೂರು: ಟ್ಯೂಷನ್​ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಸಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್ಐ ಅರವಿಂದಕುಮಾರ ಅವರು ಬಾಲಕನ ಕೊಲೆ ಆರೋಪಿಗಳಾದ ಹುಳಿಮಾವು ಠಾಣೆ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ಬಾಲಕ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು. ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್ ತಂದೆಯ ಬಳಿ ಆರೋಪಿ ಗುರುಮೂರ್ತಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆಗಾಗ ಮನೆಗೆ ಹೋಗಿ ಬರುತ್ತಿದ್ದ ಗುರುಮೂರ್ತಿ, 13 ವರ್ಷದ ನಿಶ್ಚಿತ್‌ ಟ್ಯೂಷನ್‌ನಿಂದ ಮನೆಗೆ ಬರುವಾಗ ಅಪಹರಿಸಿ ಹಣಕ್ಕೆ ಬೇಡಿಕೆಯಿಡುವ ಸಂಚು ರೂಪಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್‌ನನ್ನು ಆರೋಪಿಗಳು ಅಪಹರಿಸಿದ್ದರು. ಟ್ಯೂಷನ್ ಮುಗಿದು ಎಷ್ಟು ಹೊತ್ತಾದರೂ ಮನೆಗೆ ಬಾರದ ಮಗನ ಬಗ್ಗೆ ಆಂತಕಿತರಾದ ತಂದೆ-ತಾಯಿ ಹುಡುಕಾಟ ನಡೆಸಿದ್ದರು. ಮಗನ ಸುಳಿವು ಸಿಗದಿದ್ದಾಗ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ಏತನ್ಮಧ್ಯೆ ಬಾಲಕನ ತಂದೆಗೆ ಕರೆ ಮಾಡಿದ್ದ ಅಪಹರಣ ಮಾಡಿದ್ದ ಆರೋಪಿಗಳು ‘ಮಗನನ್ನ ಜೀವಂತವಾಗಿ ನೋಡಬೇಕು ಎಂಬ ಆಸೆಯಿದ್ದರೆ 5 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಹಣ ನೀಡುವುದಾಗಿ ಪೋಷಕರು ಒಪ್ಪಿಕೊಂಡಿದ್ದರು‌ ಹಾಗೂ ಹುಳಿಮಾವು ಠಾಣೆಗೂ ಮಾಹಿತಿ ನೀಡಿದ್ದರು. ಪೊಲೀಸರು ಅಪಹರಣಕಾರರ ಫೋನ್‌ ಕರೆ ಆಧರಿಸಿ ತನಿಖೆ ಆರಂಭಿಸಿದ್ದರು.
ಆದರೆ ಪೊಲೀಸರು ಹುಡುಕಾಟ ನಡೆಸಿದಾಗ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕತ್ತು ಕೊಯ್ದು, ಸುಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ಮುಖ ಚಹರೆ ತಿಳಿಯಬಾರದು ಎಂದು ಪೆಟ್ರೋಲ್ ಸುರಿದ ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಅಪರಾಧ ಹಿನ್ನೆಲೆ ಹೊಂದಿರುವ ಗುರುಮೂರ್ತಿ ಈ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಕೃತ್ಯಕ್ಕೆ ಕಾರಣವೇನು, ಇದರಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement