
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕದಿಂದ ತಮಿಳುನಾಡಿಗೆ ನಿತ್ಯ 2600 ಕ್ಯೂಸೆಕ್ ನೀರು ಹರಿಸುವಂತೆ ಸೋಮವಾರ ಸೂಚನೆ ಶಿಫಾರಸು ಮಾಡಿದೆ.
ಸೋಮವಾರ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಕರ್ನಾಟಕವು ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರು ಹರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಕಾವೇರಿ ನೀರು ನಿಯಂತ್ರಣಾ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು. ತಮಿಳುನಾಡು ಅಧಿಕಾರಿಗಳು ಮುಂದಿನ 15 ದಿನಗಳ ವರೆಗೆ ಕರ್ನಾಟಕವು ದಿನ ನಿತ್ಯ 13,000 ಕ್ಯೂಸೆಕ್ (16.90 ಟಿಎಂಸಿ) ನೀರು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಆಗ ಕರ್ನಾಟಕವನ್ನು ಪ್ರತಿನಿಧಿಸಿದ್ದ ಎಸಿಎಸ್ ರಾಕೇಶ್ ಸಿಂಗ್ ಅವರು, ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರು ಇಲ್ಲ. ಆದ್ದರಿಂದ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಅನಿಯಂತ್ರಿತವಾಗಿ ಜಲಾಶಯದಿಂದ ಹೊರಹೋಗುವ ನೀರನ್ನು ಮಾತ್ರ ಸದ್ಯ ಹರಿಸುತ್ತೇವೆ ಎಂದು ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ವಾದಗಳನ್ನು ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ನವೆಂಬರ್ 1ರಿಂದ 15ರ ತನಕ ನಿತ್ಯವೂ 2,6000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶಗಳಾದ ಮೈಸೂರು, ಮಂಡ್ಯ ಮತ್ತಿತರ ಕಡೆಗಳಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸುತ್ತಿವೆ. ಆದರೂ ತಮಿಳುನಾಡಿಗೆ ನೀರು ಹರಿಯುವುದು ನಿಂತಿಲ್ಲ.



ನಿಮ್ಮ ಕಾಮೆಂಟ್ ಬರೆಯಿರಿ