ಎರ್ನಾಕುಳಂ: ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಅವರ ಜೀವವನ್ನು ಇಬ್ಬರು ನರ್ಸ್ಗಳು ತೋರಿದ ಸಮಯಪ್ರಜ್ಞೆ ಮತ್ತು ತಕ್ಷಣದ ಸ್ಪಂದನೆ ಆ ವ್ಯಕ್ತಿಯ ಜೀವ ಉಳಿಸಿದೆ.
ಅಂಗಮಾಲಿಯ ಎಲ್ಎಫ್ ಆಸ್ಪತ್ರೆಯ ಸಿಬ್ಬಂದಿ ನರ್ಸ್ ಅಂಜಲಿ ಬೈಜು ಹಾಗೂ ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಆರ್ಧ್ರ ರಾಜ ಅವರು, ಕೇರಳ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಬದಿಯಲ್ಲಿ ನಡೆದ ಗದ್ದಲವನ್ನು ಗಮನಿಸಿ ಕೂಡಲೇ ಚಲಿಸುತ್ತಿದ್ದ ಬಸ್ನಿಂದ ಇಳಿದು 43 ವರ್ಷದ ವ್ಯಕ್ತಿಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್) ನೀಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬುಧವಾರ ಬೆಳಿಗ್ಗೆ ಕಾಲಡಿ ಸೇತುವೆ ಸಮೀಪದ ಎಂಸಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಕ್ಕಲ್ ಸಮೀಪದ ತಣ್ಣಿಪುಳದಲ್ಲಿ ಲಾಟರಿ ಅಂಗಡಿ ನಡೆಸುತ್ತಿರುವ ಸಿನೋಜ್ ಎಂಬವರು ಕಾರು ಚಾಲನೆ ಮಾಡಿಕೊಂಡೇ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಇದೇ ವೇಳೆ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನಗಳು ಮುಂದೆ ಸಾಗಲಿಲ್ಲ. ಪರಿಣಾಮ, ಸಿನೋಜ್ ಕಾರಿನೊಳಗೇ ಕುಸಿದು ಬಿದ್ದರು.
ಇದನ್ನು ಗಮನಿಸಿದ ಅಂಜಲಿ ಬೈಜು ಮತ್ತು ಆರ್ಧ್ರ ರಾಜ ಅವರು ತಕ್ಷಣ ಬಸ್ನಿಂದ ಇಳಿದು ಕಾರಿನತ್ತ ಧಾವಿಸಿದರು. ಅವರು ವಿಳಂಬ ಮಾಡದೇ ಸಿನೋಜ್ ಅವರಿಗೆ ಸಿಪಿಆರ್ ಆರಂಭಿಸಿದರು. ಬಳಿಕಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವಾಹನದೊಳಗೂ ನಿರಂತರವಾಗಿ ಸಿಪಿಆರ್ ಮಾಡುತ್ತಲೇ ಇದ್ದರು. ಅಂಗಮಾಲಿಯ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಿನೋಜ್ ಅವರಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಹೃದಯದ ಪರಿಧಮನಿ (ಕೊರೊನರಿ ಆರ್ಟರಿ)ಯಲ್ಲಿ ಬ್ಲಾಕ್ ಉಂಟಾಗಿರುವುದು ಪತ್ತೆಯಾಯಿತು. ಕೂಡಲೇ ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವ ನಿರೀಕ್ಷೆಯಿದೆ.
ಈ ಜೀವ ರಕ್ಷಣೆ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ. ಸಿನೋಜ್ ಎದೆನೋವಿನಿಂದ ಆಸ್ಪತ್ರೆಗೆ ಧಾವಿಸುತ್ತಿರುವ ವಿಚಾರ ತಿಳಿದ ದಾರಿಹೋಕನೊಬ್ಬ ಕಾರಿನ ಚಾಲನೆ ಮಾಡಲು ಮುಂದೆ ಬಂದರು. ಇತರರು ವಾಹನವನ್ನು ಸಂಚಾರ ದಟ್ಟಣೆಯಿಂದ ಹೊರತೆಗೆದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ನೆರವಾದರು.
ಇಬ್ಬರು ನರ್ಸ್ಗಳ ಸಮಯಪ್ರಜ್ಞೆ, ಧೈರ್ಯ ಮತ್ತು ತ್ವರಿತ ಕ್ರಮದ ಜೊತೆಗೆ ಸಾರ್ವಜನಿಕರ ಸಹಕಾರದಿಂದ ವ್ಯಕ್ತಿಯ ಜೀವ ಉಳಿದಿದ್ದು, ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನೇಕರು ಈ ಸಮಯೋಚಿತ ಸ್ಪಂದನೆಯೇ ಸಿನೋಜ್ ಅವರ ಜೀವ ಉಳಿಯಲು ಪ್ರಮುಖ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ