ನನ್ನ ಹೆಸರು ಸಾವರ್ಕರ್ ಅಲ್ಲ…ನಾನು ಗಾಂಧಿ, ಕ್ಷಮೆ ಕೇಳೋಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ

ನವದೆಹಲಿ: “ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ, ಗಾಂಧಿ ಯಾರ ಬಳಿಯೂ ಕ್ಷಮೆ ಯಾಚಿಸುವುದಿಲ್ಲ ಎಂದು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
ಇಂದು ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬ್ರಿಟನ್‌ನಲ್ಲಿ ನೀಡಿದ ಹೇಳಿಕೆ ಮತ್ತು ಮೋದಿ ಉಪನಾಮದ ಟೀಕೆ ಬಗ್ಗೆ ಕ್ಷಮೆಯಾಚಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.
ನಾನು ಸಂಸತ್ತಿನ ಒಳಗೆ ಅಥವಾ ಹೊರಗೆ ಇದ್ದೇನೆ ಎಂಬುದು ಮುಖ್ಯವಲ್ಲ ಎಂದು ಅವರು ಹೇಳಿದ್ದಾರೆ. ಅವರು ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ, ನಾನು ಸಂಸತ್ತಿನಲ್ಲಿದ್ದೇನೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ನಾನು ದೇಶಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದರು.
ಅದಾನಿ ವಿಚಾರದಲ್ಲಿ “ಪ್ರಧಾನಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ಕಂಡಿದ್ದೇನೆ. ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡಲು ಅವರು ಬಯಸುವುದಿಲ್ಲ” ಎಂದರು.
ಕ್ಷಮೆಯಾಚಿಸುವಂತೆ ಬಿಜೆಪಿ ಮಾಡುತ್ತಿರುವ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ನಾನು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ. ನಾವು ಪ್ರತಿದಿನ ಇದಕ್ಕೆ ಉದಾಹರಣೆಗಳನ್ನು ನೋಡುತ್ತಿದ್ದೇವೆ. ನಾನು ಸಂಸತ್ತಿನಲ್ಲಿ ಪ್ರಧಾನಿ ಮೋದಿ- ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೇನೆ. ಯಾರ 20,000 ಕೋಟಿ ರೂಪಾಯಿಗಳು ಅದಾನಿ ಶೆಲ್ ಕಂಪನಿಗಳಿಗೆ ಹೋಯಿತು ಎಂಬ ನನ್ನ ಸರಳ ಪ್ರಶ್ನೆಯಿಂದ ಪ್ರಧಾನಿಯನ್ನು ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕ ಇದಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

ಗೌತಮ್ ಅದಾನಿ ಅವರೊಂದಿಗಿನ ಪ್ರಧಾನಿ ಮೋದಿ ಅವರ ಸಂಬಂಧವನ್ನು ಪ್ರಶ್ನಿಸುವ ತಮ್ಮ ಭಾಷಣದ ಭಾಗಗಳನ್ನು ಸಂಸದೀಯ ದಾಖಲೆಗಳಿಂದ ತೆಗೆದುಹಾಕಿದ್ದರ ಬಗ್ಗೆಯೂ ಅವರು ಮಾತನಾಡಿದರು.
ಸಂಸತ್ತಿನಲ್ಲಿ ಮಾಡಿದ ನನ್ನ ಭಾಷಣವನ್ನು ರದ್ದುಗೊಳಿಸಲಾಯಿತು, ನಂತರ ನಾನು ಲೋಕಸಭೆಯ ಸ್ಪೀಕರ್‌ಗೆ ವಿವರವಾದ ಉತ್ತರವನ್ನು ಬರೆದಿದ್ದೇನೆ. ನಾನು ವಿದೇಶಿ ಶಕ್ತಿಗಳಿಂದ ಸಹಾಯ ಕೇಳಿದೆ ಎಂದು ಕೆಲವು ಸಚಿವರು ನನ್ನ ಬಗ್ಗೆ ಸುಳ್ಳು ಹೇಳಿದರು. ಆದರೆ ನಾನು ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ, ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ನಾನು ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ದೇಶದ ಆಂತರಿಕ ವ್ಯವಹಾರಗಳಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳ ಹಸ್ತಕ್ಷೇಪವನ್ನು ತಾನು ಬಯಸಿದ್ದೆ ಎಂಬ ಬಿಜೆಪಿಯ ಆರೋಪಗಳನ್ನು ಅವರು ನಿರಾಕರಿಸಿದರು. ನಾನು ಭಾರತ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸುವುದು ನನ್ನ ಹಕ್ಕು ಎಂದು ನಾನು ಸ್ಪೀಕರ್‌ಗೆ ಕೇಳಿದೆ. ಆದರೆ ಅವರು ನನಗೆ ಅವಕಾಶ ನೀಡಲಿಲ್ಲ” ಎಂದರು.

ನನಗೆ ಒಂದೇ ಒಂದು ಗುರಿ ಇದೆ ಮತ್ತು ಅದು ಸತ್ಯಕ್ಕಾಗಿ ಹೋರಾಡುವುದು ಮತ್ತು ಈ ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸುವುದು. ನನ್ನನ್ನು ಜೀವಮಾನವಿಡೀ ಅನರ್ಹಗೊಳಿಸಲಿ, ನನ್ನ ಜೀವಿತಾವಧಿಯವರೆಗೆ ಜೈಲಿನಲ್ಲಿರಿಸಲಿ, ನಾನು ಹೋರಾಟದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದರು.
ನಾನು ವಯನಾಡ್‌ ಜನರೊಂದಿಗೆ ಕುಟುಂಬದಂತಹ ಸಂಬಂಧವನ್ನು ಹಂಚಿಕೊಂಡಿದ್ದೇನೆ ಮತ್ತು ನಾನು ವಯನಾಡಿನ ಜನರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು. ನಾನು ಚಿಂತಿತನಾಗಿ ಕಾಣುತ್ತಿದ್ದೇನೆಯೇ? ನಾನು ಉತ್ಸುಕನಾಗಿದ್ದೇನೆ,” ಎಂದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವರೊಬ್ಬರೇ ಅಲ್ಲ…
ಅವರೊಬ್ಬರೇ ಅಲ್ಲ, ಬಿಜೆಪಿಯ ಆರು ಮಂದಿ ಸೇರಿದಂತೆ ದೇಶಾದ್ಯಂತ 32 ನಾಯಕರನ್ನು ಅನರ್ಹಗೊಳಿಸಲಾಗಿದೆ. ಕರ್ನಾಟಕದಲ್ಲಿ ಚುನಾವಣಾ ಲಾಭಕ್ಕಾಗಿ ರಾಹುಲ್ ಗಾಂಧಿಯನ್ನು ಬಲಿಪಶು ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ರವಿಶಂಕರ ಪ್ರಸಾದ ಹೇಳಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸೂರತ್‌ ನ್ಯಾಯಾಲಯವು ಗುರುವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದೆ. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರ ಪರಿಣಾಮವಾಗಿ, ಮರುದಿನ ಅವರನ್ನು ಲೋಕಸಭಾ ಸದಸಯತ್ವದಿಂದ ಅನರ್ಹಗೊಳಿಸಲಾಯಿತು. ಈ ತೀರ್ಪಿನ ವಿರುದ್ಧ ಅವರು ಇನ್ನೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement