ರಾಹುಲ್ ಗಾಂಧಿಗೆ ಸಂಕಷ್ಟ : ಬ್ರಿಟಿಷ್ ಪೌರತ್ವ ಆರೋಪ ; ಎಫ್‌ಐಆರ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

ಲಕ್ನೋ : ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧದ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮತ್ತು ಸಿಬಿಐ (CBI) ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ.

ದೂರಿನಲ್ಲಿ ಏನಿದೆ?
ಕರ್ನಾಟಕ ಮೂಲದ ಎಸ್. ವಿಗ್ನೇಶ್ ಶಿಶಿರ ಎಂಬುವವರು ಈ ಸಂಬಂಧ ದೂರು ದಾಖಲಿಸಿದ್ದರು. ರಾಹುಲ್ ಗಾಂಧಿ ಅವರು ಬ್ರಿಟನ್ ಮೂಲದ ‘ಬ್ಯಾಕ್‌ಆಪ್ಸ್ ಲಿಮಿಟೆಡ್’ (Backops Ltd) ಎಂಬ ಕಂಪನಿಯ ನಿರ್ದೇಶಕರಾಗಿದ್ದರು. ಸದರಿ ಕಂಪನಿಯ ದಾಖಲೆಗಳಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ‘ಬ್ರಿಟಿಷ್’ ಎಂದು ಘೋಷಿಸಿಕೊಂಡಿದ್ದರು ಎಂಬುದು ಅರ್ಜಿದಾರರ ಆರೋಪ.
ರಾಹುಲ್ ಗಾಂಧಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಅಧಿಕೃತ ರಹಸ್ಯಗಳ ಕಾಯ್ದೆ (Official Secrets Act), ಪಾಸ್‌ಪೋರ್ಟ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಶಿಶಿರ್ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆರಂಭದಲ್ಲಿ ಈ ದೂರಿನ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಇದರಿಂದ ಬೇಸತ್ತ ಶಿಶಿರ ಅವರು ವಿಚಾರಣಾ ನ್ಯಾಯಾಲಯದ (Trial Court) ಮೆಟ್ಟಿಲೇರಿದ್ದರು.
ರಾಹುಲ್ ಗಾಂಧಿ ಈಗಾಗಲೇ ಬ್ರಿಟಿಷ್ ಪೌರತ್ವ ಪಡೆದಿರುವುದರಿಂದ, ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಶಿಶಿರ ಈ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೂ ಮನವಿ ಸಲ್ಲಿಸಿದ್ದರು.
ಅರ್ಜಿದಾರರಿಗೆ ಭದ್ರತೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆಗಸ್ಟ್ ತಿಂಗಳಿನಲ್ಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿತ್ತು. ಅರ್ಜಿದಾರ ವಿಘ್ನೇಶ ಶಿಶಿರ ಅವರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ಒಬ್ಬ ವೈಯಕ್ತಿಕ ಭದ್ರತಾ ಅಧಿಕಾರಿಯನ್ನು (PSO) ನೇಮಿಸಿ, ದಿನದ 24 ಗಂಟೆಯೂ ಭದ್ರತೆ ಒದಗಿಸುವಂತೆ ಆದೇಶಿಸಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement