ಬೆಂಗಳೂರು: ಖಾಲಿ ನಿವೇಶನ ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದ್ದ ಕೊಳೆತ ಸ್ಥಿತಿಯಲ್ಲಿದ್ದ 28 ವರ್ಷದ ಮಹಿಳೆಯ ಶವದ ಗುರುತು ಪತ್ತೆ ಹಚ್ಚಲು ಬಟ್ಟೆಯ ಮೇಲಿದ್ದ ಒಂದು ಸಣ್ಣ ಟ್ಯಾಗ್ ಪ್ರಮುಖ ಸುಳಿವಾಗಿ ಪರಿಣಮಿಸಿದ್ದು, ಅದರ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ಈ ತಿಂಗಳ ಸೆಪ್ಟೆಂಬರ್ 2ರಂದು ಅಗ್ರಹಾರ ಲೇಔಟ್‌ನ ಖಾಲಿ ಜಾಗವೊಂದರಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದ ಸ್ವಚ್ಛತಾ ಕಾರ್ಮಿಕರ ತಂಡಕ್ಕೆ ಹಾಸಿಗೆಯಲ್ಲಿ ಸುತ್ತಿ ಕಟ್ಟಲಾಗಿದ್ದ ಮಹಿಳೆಯ ಕೊಳೆತ ಶವ ಪತ್ತೆಯಾಗಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಶವವು ತೀವ್ರವಾಗಿ ಕೊಳೆತಿದ್ದ ಕಾರಣ ಗುರುತು ಪತ್ತೆ ಮಾಡುವುದು ಸವಾಲಾಗಿತ್ತು.
ಆದರೆ ಮಹಿಳೆ ಧರಿಸಿದ್ದ ಬಟ್ಟೆಯ ಮೇಲಿದ್ದ ಟ್ಯಾಗ್ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿತು. ಟ್ಯಾಗ್‌ನ ಆಧಾರದಲ್ಲಿ ಆ ಬಟ್ಟೆಯನ್ನು ಯಾವ ಮಳಿಗೆಯಿಂದ ಖರೀದಿಸಲಾಗಿತ್ತು ಎಂಬುದನ್ನು ಪತ್ತೆಹಚ್ಚಿದ ಪೊಲೀಸರು, ಅಲ್ಲಿಂದ ಆ ಬಟ್ಟೆ ಎಲ್ಲಿಂದ ಖರೀದಿಯಾಗಿದೆ ಎಂಬುದನ್ನು ಪತ್ತೆ ಹಚ್ಚಿದರು. ಅಲ್ಲಿ ದಾಖಲಾಗಿದ್ದ ಖರೀದಾರರ ಮಾಹಿತಿ ಸಂಗ್ರಹಿಸಿದಾಗ ಈ ಶವ ಒಡಿಶಾ ಮೂಲದ ಅನುಸೂಯಾ ಬೆಹ್ರಾ ಎಂದು ಗುರುತಿಸಲು ಸಾಧ್ಯವಾಯಿತು.
ಅನುಸೂಯಾ ಪತಿ 32 ವರ್ಷದ ಸಾಗರಚಂದ್ರ ರಾವತ್ ಪೊಲೀಸರು ಪತ್ತೆಹಚ್ಚಿದರು. ಒಡಿಶಾ ಮೂಲದವರಾದ ಈ ದಂಪತಿ ಬೆಂಗಳೂರಿನಲ್ಲಿ ವಾಸವಿದ್ದು, ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾಗರಚಂದ್ರ ರಾವತ್ ಅಡುಗೆ ವಿಭಾಗದ ಮೇಲ್ವಿಚಾರಕರಾಗಿ (ಕಿಚನ್ ಸೂಪರ್‌ವೈಸರ್) ಕಾರ್ಯನಿರ್ವಹಿಸುತ್ತಿದ್ದ.
ಸೆಪ್ಟೆಂಬರ್ 9ರಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸುಮಾರು ಒಂದು ತಿಂಗಳ ಹಿಂದೆಯೇ ಕೊಲೆ ನಡೆದಿರುವುದಾಗಿ ತಿಳಿಸಿದ್ದಾರೆ. ದಂಪತಿ ನಡುವೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳಗಳು ನಡೆಯುತ್ತಿದ್ದು, ಆಗಸ್ಟ್ 11ರಂದು ಅನುಸೂಯಾ ಪತಿ ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ತೆರಳಿ ಸಂಬಳದ ವಿಚಾರವಾಗಿ ಪ್ರಶ್ನಿಸಿದ್ದರು. ಅಲ್ಲಿಂದ ಆರಂಭವಾದ ವಾಗ್ವಾದವು ಬಳಿಕ ಎಂಎಸ್ ನಗರದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ಮುಂದುವರಿದಿದ್ದು, ಈ ವೇಳೆ ಸಾಗರ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಶವವನ್ನು ಹಾಸಿಗೆಯೊಳಗೆ ತುರುಕಿ, ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದ ಆರೋಪಿಯು, ಮೂರು ದಿನಗಳ ಕಾಲ ಅದನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಬಳಿಕ ಮಳೆ ಬರುತ್ತಿದ್ದ ರಾತ್ರಿ ಹಳೆಯ ಹಾಸಿಗೆಯನ್ನು ಎಸೆಯುವ ನಾಟಕವಾಡಿ, ತನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿದ್ದ ಗಿಡಗಂಟಿಗಳಿಂದ ಆವೃತವಾದ ಖಾಲಿ ಜಾಗದಲ್ಲಿ ಶವವನ್ನು ಎಸೆದಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶವವನ್ನು ಯಾರಾದರೂ ನೋಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರೋಪಿಯು ನಾಲ್ಕೈದು ದಿನಗಳ ಕಾಲ ಆ ಸ್ಥಳದ ಮೇಲೆ ನಿಗಾ ಇಟ್ಟಿದ್ದ ಹಾಗೂ ಅಲ್ಲಿಗೆ ಹೋಗಿ ಬರುತ್ತಿದ್ದ. ಅಲ್ಲದೆ, ತನ್ನ ಕಿಚನ್ ಸೂಪರ್‌ವೈಸರ್ ಕೆಲಸವನ್ನೂ ಎಂದಿನಂತೆ ಮುಂದುವರಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ನಡೆದ ಬಳಿಕ ಅನುಸೂಯಾ ಅವರ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದ ಆರೋಪಿಯು, ಮಹಿಳೆಯ ಕುಟುಂಬದವರಿಗೆ ಆಕೆ ಯಾರೊಂದಿಗೋ ಓಡಿಹೋಗಿದ್ದಾಳೆ ಮತ್ತು ಆಕೆಯ ಸಂಪರ್ಕ ಸಿಗುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದ.
ದಂಪತಿ ನಡುವೆ ಆಗಾಗ ನಡೆಯುತ್ತಿದ್ದ ಕಲಹಗಳ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ ಪೊಲೀಸರು ಸಾಗರಚಂದ್ರ ರಾವತ್ ಮೇಲೆ ಅನುಮಾನ ಕೇಂದ್ರೀಕರಿಸಿದ್ದರು. ವಿಚಾರಣೆ ವೇಳೆ ಆತ ಕೊಲೆ ಹಾಗೂ ಶವ ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ