

ಮುಂಬೈ: ಐಪಿಎಲ್ 2027ರ ಸೀಸನ್‌ಗೆ ಮುನ್ನ ನಡೆದ ಆಟಗಾರರ ವರ್ಗಾವಣೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ವೇಗಿ ಅರ್ಷದೀಪ್ ಸಿಂಗ್ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು 18 ಕೋಟಿ ರೂ. ಒಪ್ಪಂದದ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ತಂಡದಿಂದ 16.35 ಕೋಟಿ ರೂ. ಪಡೆಯುತ್ತಿದ್ದರು. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಅವರು ತಮ್ಮ ಹಿಂದಿನ 18 ಕೋಟಿ ರೂ. ಒಪ್ಪಂದದ ಮೊತ್ತದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಪಯಣ
ಈ ವರ್ಗಾವಣೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರ ಎರಡನೇ ಅವಧಿ ಅಂತ್ಯಗೊಂಡಿದೆ. 2024ರ ಐಪಿಎಲ್ ಸೀಸನ್‌ನಲ್ಲಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದ ಅವರು, ದೀರ್ಘಕಾಲ ತಂಡದ ನಾಯಕನಾಗಿದ್ದ ರೋಹಿತ್ ಶರ್ಮಾ ಅವರ ಬದಲಿಗೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು.
2015ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕವೇ ಹಾರ್ದಿಕ್ ತಮ್ಮ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದರು. ಆ ತಂಡದಲ್ಲಿ ಏಳು ಸೀಸನ್‌ಗಳನ್ನು ಆಡಿದ ಬಳಿಕ, 2022ರ ಐಪಿಎಲ್‌ಗೆ ಮುನ್ನ ಗುಜರಾತ್ ಟೈಟನ್ಸ್ ತಂಡವನ್ನು ಸೇರಿಕೊಂಡಿದ್ದರು.
ನಾಯಕನಾಗಿ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರಿದ ಮೊದಲ ಸೀಸನ್‌ನಲ್ಲೇ ಹಾರ್ದಿಕ್ ಗಮನಾರ್ಹ ಸಾಧನೆ ಮಾಡಿದ್ದರು. ತಂಡದ ಚೊಚ್ಚಲ ಐಪಿಎಲ್ ಸೀಸನ್‌ನಲ್ಲೇ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. 2023ರಲ್ಲಿಯೂ ಗುಜರಾತ್ ಟೈಟನ್ಸ್ ತಂಡ ಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ 2024ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಾರ್ದಿಕ್ ನಾಯಕತ್ವದ ಹೊಣೆ ಹೊತ್ತಿದ್ದರು.
ಐಪಿಎಲ್‌ನಲ್ಲಿ ಇದುವರೆಗೆ 162 ಪಂದ್ಯಗಳನ್ನಾಡಿರುವ ಹಾರ್ದಿಕ್ ಪಾಂಡ್ಯ, 146.28ರ ಸ್ಟ್ರೈಕ್‌ರೇಟ್‌ನಲ್ಲಿ 2,955 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿಯೂ 82 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂಬುದನ್ನು ಅವರು ತಮ್ಮ ಪ್ರದರ್ಶನದ ಮೂಲಕ ಸಾಬೀತುಪಡಿಸಿದ್ದಾರೆ.
2015ರಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಹಾರ್ದಿಕ್, ಲೀಗ್‌ನ ಅತ್ಯಂತ ಪ್ರಭಾವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದ ಅಭಿಯಾನಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.


ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್ ಸಿಂಗ್ ಬಲ
ಅರ್ಷದೀಪ್ ಸಿಂಗ್ ಅವರು 2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಪಂಜಾಬ್ ಕಿಂಗ್ಸ್ ತಂಡದೊಂದಿಗೆ ದೀರ್ಘಕಾಲದ ನಂಟು ಹೊಂದಿದ್ದರು. ಐಪಿಎಲ್‌ನಲ್ಲಿನ ಅವರ ಉತ್ತಮ ಪ್ರದರ್ಶನವೇ ಭಾರತ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಲು ನೆರವಾಗಿತ್ತು.
ಐಪಿಎಲ್‌ನಲ್ಲಿ 96 ಪಂದ್ಯಗಳನ್ನಾಡಿರುವ ಅರ್ಷದೀಪ್ 111 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೊಸ ಚೆಂಡಿನಲ್ಲಿ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಹಾಗೂ ಪಂದ್ಯದ ಕೊನೆಯ ಓವರ್‌ಗಳಲ್ಲಿ ಒತ್ತಡದ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಕೌಶಲ ಅರ್ಷದೀಪ್ ಅವರನ್ನು ಪಂಜಾಬ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವನ್ನಾಗಿ ಮಾಡಿತ್ತು.
2025ರ ಐಪಿಎಲ್ ಸೀಸನ್‌ನಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದ ಅರ್ಷದೀಪ್, 2026ರ ಸೀಸನ್‌ನಲ್ಲಿಯೂ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಎಡಗೈ ವೇಗದ ಬೌಲಿಂಗ್ ಹಾಗೂ ಪಂದ್ಯದ ವಿವಿಧ ಹಂತಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ