ಯಾವುದೇ ವಸ್ತು- ಸಂಗತಿ ವರ್ತಮಾನಕ್ಕೆ ಅನ್ವಯವಾದರೆ ಅದು ಪ್ರಸ್ತುತವಾಗುತ್ತದೆ ; ʼಪುರುಷ ಸೂಕ್ತ ಕೃತಿʼ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾರಾಯಣ ಯಾಜಿ

ಶಿರಸಿ : ಯಾವುದೇ ಕೃತಿಗಳು, ವಸ್ತು- ಸಂಗತಿಗಳು ವರ್ತಮಾನಕ್ಕೆ ಅನ್ವಯವಾಗುವಂತಿದ್ದರೆ ಅದು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ರಘುಪತಿ ಹೆಗಡೆ ಬೆಳ್ಳಿಕೇರಿಯವರ ಕೃತಿಯಾದ “ಪುರುಷ ಸೂಕ್ತ” ಕೃತಿ ಪ್ರಸ್ತುತ ಕಾಲದಲ್ಲಿ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವೈಜ್ಞಾನಿಕ ವಿಷಯಗಳನ್ನು ಒಳಗೊಂಡ ಒಂದು ಕೃತಿಯಾಗಿದೆ. ಇದಕ್ಕೆ ಕಾರಣ ಅವರು ಆರಿಸಿಕೊಂಡಿರುವ ವಸ್ತು ಎಂದು ಲೇಖಕ, ಖ್ಯಾತ ತಾಳಮದ್ದಲೆ ಅರ್ಥಧಾರಿ ನಾರಾಯಣ ಯಾಜಿ ಸಾಲೆಬೈಲ ಹೇಳಿದ್ದಾರೆ.
ಭಾನುವಾರ ತಾಲೂಕಿನ ಯಡಹಳ್ಳಿಯ ಸುಕರ್ಮ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೆಕೇರಿಯವರ ಪುರುಷ ಸೂಕ್ತ ಕೃತಿ ಕುರಿತು ಮಾತನಾಡಿದ ಅವರು, ಯಾವುದೇ ವಿಷಯ-ವಸ್ತುವನ್ನು ವರ್ತಮಾನಕ್ಕೆ ಅನ್ವಯಿಸಿದರೆ ಮಾತ್ರ ಅದು ಪ್ರಸ್ತುತವಾಗುತ್ತದೆ. ಇಲ್ಲವಾದರೆ ಅದನ್ನು ವರ್ತಮಾನಕ್ಕೆ ತರಲು ಪದೇ ಪದೇ ಮಗುಚಿ ಹಾಕಬೇಕಾಗುತ್ತದೆ. ಇಲ್ಲವಾದಲ್ಲಿ ಅವುಗಳು ಪಾಚಿಕಟ್ಟುತ್ತವೆ ಎಂದು ಅಭಿಪ್ರಾಯಪಟ್ಟರು.

ವೇದಗಳಲ್ಲಿ ಪುರುಷ ಸೂಕ್ತವೆನ್ನುವುದು ಬಹು ಮುಖ್ಯ ಸೂಕ್ತ. ಋಗ್ವೇದದ ಹತ್ತನೆಯ ಮಂಡಳದ ೯೦ನೆಯ ಸೂಕ್ತವಾದ ಇದರಲ್ಲಿ ಒಟ್ಟೂ ೧೬ ಮಂತ್ರಗಳಿವೆ. ಇದನ್ನು ಜಗತ್ ಸೃಷ್ಟಿಯ ವಿಕಾಸದ ಸೂತ್ರಗಳನ್ನು ವಿವರಿಸುವ ಮಹತ್ವದ ಮಂತ್ರಗಳೆಂದು ಕರೆಯಲಾಗುತ್ತದೆ. ಈ ವಿಷಯವನ್ನು ಅವಲೋಕಿಸುವಾಗ ಮೊದಲು ನಾವು ಸೃಷ್ಟಿ ಪೂರ್ವದ ಸ್ಥಿತಿಯನ್ನು ಆಲೋಚಿಸಬೇಕಾಗುತ್ತದೆ ಹಾಗೂ ಅವಲೋಕಿಸಬೇಕಾಗುತ್ತದೆ ಎಂದರು.
ಋಗ್ವೇದದಲ್ಲಿ ಈ ಸೃಷ್ಟಿಯ ವಿಷಯದಲ್ಲಿ ಮತ್ತು ಸೃಷ್ಟಿ ಹೇಗಾಯಿತೆಂದು ವಿವರಿಸುವ ಅನೇಕ ಸೂಕ್ತಗಳಿವೆ. ಅವುಗಳಲ್ಲಿ ಹತ್ತನೆಯ ಮಂಡಲದಲ್ಲಿ ಬರುವ ೮೧, ೮೨, ೯೦, ೧೨೯, ೧೩೦ ಮತ್ತು ೧೯೦ ಬಹಳ ಮುಖ್ಯವಾದವುಗಳು. ಅದರಲ್ಲೂ ೯೦ನೆಯ ಮಂಡಲದ ಪುರುಷಸೂಕ್ತದಲ್ಲಿ ಈ ಕುರಿತಾಗಿ ವರ್ಣನೆಗಳ ಬಗ್ಗೆ ಸಾಂಕೇತಿಕ ಅರ್ಥವನ್ನು ಗ್ರಹಿಸಿ ಅದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಪುರುಷ ಸೂಕ್ತದ ಸೃಷ್ಟಿ ತತ್ವದ ಬಗ್ಗೆ ಆರ್‌.ಎಸ್‌.ಹೆಗಡೆ ಬೆಳ್ಳಕೇರಿಯವರು ಅದ್ಭುತ ಪುಸ್ತಕವನ್ನು ಹೊರತಂದಿದ್ದಾರೆ ಎಂದರು.
೯೨ ವರ್ಷದ ಬೆಳ್ಳೆಕೇರಿಯವರ ಅನೇಕ ವರ್ಷಗಳ ತಪಸ್ಸಿನ ಫಲವೇ ಈ ಪುರುಷ ಸೂಕ್ತ ಪುಸ್ತಕ. ಪುರುಷ ಸೂಕ್ತದಲ್ಲಿನ ಶ್ಲೋಕಗಳನ್ನು ಜ್ಞಾನ- ವಿಜ್ಞಾನದ ಹೋಲಿಕೆಯ ಮೇಲೆ ಅರ್ಥೈಸಲಾಗಿದೆ. ಇವತ್ತಿನ ಕಾಲಕ್ಕೆ ಬೇಕಾದ ರೀತಿಯಲ್ಲಿ ಲೇಖಕರು ವೈಜ್ಞಾನಿಕ ತಳಹದಿಯ ಮೇಲೆ ಈ ಪುಸ್ತಕವನ್ನು ಬರೆದಿದ್ದಾರೆ. ಅವರು ಪುರುಷ ಸೂಕ್ತ ನೋಡಿದ ದೃಷ್ಟಿಕೋನವೇ ಅದ್ಭುತವಾಗಿದೆ. ಹೀಗಾಗಿಯೇ ಅದು ಪ್ರಸ್ತುತವಾಗುತ್ತದೆ ಎಂದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಿದ್ವಾನ್ ಶಂಕರ ಭಟ್ ಬಾಲಿಗದ್ದೆ ಅವರು, ಭಾರತೀಯ ಸನಾತನ ಪರಂಪರೆಯಲ್ಲಿ ಹೊಸ ಅರ್ಥದಲ್ಲಿ ಪ್ರಕಾಶಿಸುವ ಸಾಮರ್ಥ್ಯ ವೇದ ಮಂತ್ರಗಳಿಗೆ ಇದೆ ಎಂದರು.
ಹಿರಿಯ ವಿದ್ವಾಂಸ ಉಮಾಕಾಂತ ಭಟ್‌ ಕೆರೆಕೈ ಮಾತನಾಡಿ, ಯಡಳ್ಳಿಯನ್ನು ಸರಸ್ವತಿಯ ಕ್ಷೇತ್ರವನ್ನಾಗಿಸಿದವರು ಆರ್.ಎಸ್. ಹೆಗಡೆಯವರು. ಅವರ ಸಹೋದರ ಆಗ್ರಾ ಘರಾನೆ ಸಂಗೀತವನ್ನು ಶಿರಸಿಗೆ ತಂದವರು. ಮುಂಬಯಿಗೆ ತೆರಳಿದ್ದ ಆರ್.ಎಸ್. ಹೆಗಡೆಯವರು ಊರಿಗೆ ಶೈಕ್ಷಣಿಕ ನಾಯಕತ್ವ ಕೊಟ್ಟವರು. ೩೦ ಸಾವಿರ ಮಕ್ಕಳಿಗೆ ಪಾಠ ಮಾಡಿದವರು. ಅವರ ವೈಜ್ಞಾನಿಕ ಕೃಷಿ ಪುರುಷ ಸೂಕ್ತದ ತನಕ ಬಂದಿದೆ ಎಂದರು.
ನಿವೃತ್ತ ಸಂಪಾದಕ ಅಶೋಕ ಹಾಸ್ಯಗಾರ ಮಾತನಾಡಿ, ಈ ಪುಸ್ತಕದ ಪ್ರೂಫ್‌ ನೋಡುವಾಗ ಬಾಲ್ಯದಲ್ಲಿ ಅಜ್ಜನವರಿಂದ ಕೇಳಿದ ಪುರುಷಸೂಕ್ತ ಮನನವಾಯಿತು. ಈ ಪುಸ್ತಕದ ಪ್ರೂಫ್‌, ಪುಸ್ತಕದಲ್ಲಿ ವಿಭಾಗವಾರು ವರ್ಗೀಕರಣ, ಪರಿಷ್ಕರಣೆ ಮಾಡಲು ಮೂರು ತಿಂಗಳು ಬೇಕಾಯಿತು. ಇದು ಗುರುವಿನ ಆಶೀರ್ವಾದ. ಈ ಕಾಯಕದಿಂದ ಆರ್.ಎಸ್. ಹೆಗಡೆಯವರ ಶಿಷ್ಯೆಯಾಗಿದ್ದ ನನ್ನ ಮಡದಿ ಸುನಂದಾಳ ತಂದೆಯವರ ಋಣ ಸಂದಾಯ ಆಯಿತೆಂದು ನಾನು ವಿನೀತನಾಗಿ ಭಾವಿಸಿರುವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಚಿತ್ರಕಾರ ಸತೀಶ ಯಲ್ಲಾಪುರ ಮಾತನಾಡಿ, ತೈಲ ಚಿತ್ರದ ಮಾದರಿಯನ್ನು ರೇಖೆಗಿಳಿಸುವ ಕಾರ್ಯವನ್ನು ಸ್ಪಂಜಿನ ತಂತ್ರಜ್ಞಾನದಿಂದ ಮಾಡಿದೆ. ಇದಕ್ಕಾಗಿ ಪುಸ್ತಕವನ್ನು ಹಗಲವು ಬಾರಿ ಓದಬೇಕಾಯಿತು ಎಂದು ನೆನಪಿಸಿಕೊಂಡರು. ನಂತರದಲ್ಲಿ ಮುದ್ರಕರು ಅಪೇಕ್ಷೆ ಪಟ್ಟಂತೆ ಇನ್ನೂ ಹೆಚ್ಚಿನ ಚಿತ್ರಬಿಡಿಸಿದೆ. ಇದು ನನಗೆದೈವಿಕವಾಗಿ ಒದಗಿ ಬಂದಿದ್ದು ಎಂದು ಭಾವಿಸಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃತಿಕಾರ ಆರ್‌.ಎಸ್‌.ಹೆಗಡೆ ಬೆಳ್ಳೆಕೇರಿಯವರು ಮಾತನಾಡಿ, ತಾನಗೆ ನಕ್ಷತ್ರ ವೀಕ್ಷಣೆ ಹ್ವಾಸವಿದ್ದದ್ದು ಈ ಕೃತಿ ರಚನೆಗೆ ಬಹಳಷ್ಟು ಸಹಾಯ ಮಾಡಿತು ಹಾಗೂ ಪುರುಷ ಸೂಕ್ತವನ್ನು ವಿಜ್ಞಾನದ ಹಿನ್ನೆಲೆಯಲ್ಲಿ ನೋಡುವಂತೆ ಮಾಡಿತು. ಪುರುಷ ಸೂಕ್ತದಲ್ಲಿ ಜ್ಞಾನ-ವಿಜ್ಞಾನ-ಉಪಾಸನೆ ಹಾಗೂ ಕರ್ಮಗಳಿಗೆ ಸಂಬಂಧಿಸಿದ ವಿಷಯಗಳಿವೆ. ನನ್ನ ದೃಷ್ಟಿಯಲ್ಲಿ ಇದು ಮಹತ್ವದ ಸೂಕ್ತಗಳಲ್ಲಿ ಒಂದು ಎಂದರು. ಪುರುಷ ಸೂಕ್ತ ಪ್ರಕಟಗೊಳ್ಳಲು ಪ್ರಮುಖವಾಗಿ ಕಾರಣರಾದ ಅಶೋಕ ಹಾಸ್ಯಗಾರ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಿಶೋರ ಹೆಗಡೆ ಸ್ವಾಗತಿಸಿದರು.ವೆಂಕಟಾಚಲ ಭಟ್‌ ಕರಸುಳ್ಳಿ ನಿರ್ವಹಿಸಿದರು. ಆರ್‌.ಟಿ. ಭಟ್ಟ ವಂದಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement