ಇಂಫಾಲ: ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಣಿಪುರದಲ್ಲಿ ಭಾನುವಾರ ನಡೆದಿದೆ.
ಮುಂದಿನ ತಿಂಗಳು ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅನೇಕ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅವರ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ಕಚೇರಿಗಳಲ್ಲಿ ಪ್ರತಿಭಟನೆ ನಡೆದಿದೆ. ಇಂಫಾಲದಲ್ಲಿನ ಬಿಜೆಪಿ ಕೇಂದ್ರ ಕಚೇರಿಗೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅಸಮಾಧಾನಗೊಂಡ ಅನೇಕ ನಾಯಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಪಕ್ಷ ತೊರೆದ ನಾಯಕರ ಸಂಖ್ಯೆ ಎಷ್ಟೆಂಬುದು ಸೊಷ್ಟವಾಗಿಲ್ಲ. ಕಾಂಗ್ರೆಸ್ ತೊರೆದು ಪಕ್ಷಾಂತರ ಮಾಡಿದವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿ ಬಹುತೇಕ ನಾಯಕರು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ ಕೇವಲ 21 ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೂ, ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿತ್ತು.
ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ 60 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಅದು ಭಾನುವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಪಕ್ಷ ಸೇರಿದ 16 ಕಾಂಗ್ರೆಸ್ ಶಾಸಕರ ಪೈಕಿ, ಕನಿಷ್ಠ 10 ಮಂದಿಗೆ ಟಿಕೆಟ್ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಕೇವಲ ಮೂವರು ಮಹಿಳೆಯರಿದ್ದಾರೆ. ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಮಣಿಪುರ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಗೋವಿಂದಾಸ್ ಕೊಂತೌಜಮ್ ಅವರಿಗೆ ಟಿಕೆಟ್ ದೊರಕಿದೆ.
ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡು ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಸರ್ಕಾರ ರಚಿಸಿತ್ತು. ಆದರೆ ಚುನಾವಣೆಗೆ ಅದು ಮೈತ್ರಿ ಮಾಡಿಕೊಂಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ