
ಕೇರಳದ ಬಸ್ಸಿನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ 35 ವರ್ಷದ ಮಹಿಳಾ ಇನ್ಫ್ಲುಯೆನ್ಸರ್ (Influencer) ಅವರನ್ನು ಬಂಧಿಸಲಾಗಿದೆ. ಈಕೆಯ ಆರೋಪದಿಂದ ಮನನೊಂದ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದ ನಂತರ ಈ ಬಂಧನವಾಗಿದೆ.
ಕಳೆದ ವಾರ ಶಿಮ್ಜಿತಾ ಮುಸ್ತಫಾ ಮತ್ತು ದೀಪಕ ಯು ಎಂಬುವವರು ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ದೀಪಕ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮುಸ್ತಫಾ ವೀಡಿಯೊ ರೆಕಾರ್ಡ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊ ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು.
ಈ ವೀಡಿಯೋ ವೈರಲ್ ಆದ ಎರಡು ದಿನಗಳ ನಂತರ, ಅಂದರೆ ಭಾನುವಾರ, ದೀಪಕ ಅವರ ತಂದೆ-ತಾಯಿ ಕೋಝಿಕ್ಕೋಡ್ನಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಮಗ ನೇಣು ಹಾಕಿಕೊಂಡಿರುವುದನ್ನು ಕಂಡಿದ್ದಾರೆ. ದೀಪಕ ನಿರಪರಾಧಿಯಾಗಿದ್ದ ಮತ್ತು ವೀಡಿಯೊ ವೈರಲ್ ಆದ ನಂತರ ತೀವ್ರ ಅವಮಾನಕ್ಕೊಳಗಾಗಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಶನಿವಾರ ದೀಪಕ ಅವರ ಜನ್ಮದಿನವಾಗಿತ್ತು, ಆದರೂ ಅವರು ಕಳೆದ ಎರಡು ದಿನಗಳಿಂದ ಆಹಾರ ಸೇವಿಸಿರಲಿಲ್ಲ ಎಂದು ತಿಳಿದುಬಂದಿದೆ.

“ನನ್ನ ಮಗನಿಗೆ ಇದನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವನ ಮೇಲೆ ಈ ಹಿಂದೆ ಯಾವುದೇ ತಪ್ಪು ಆರೋಪಗಳೂ ಇರಲಿಲ್ಲ,” ಎಂದು ದೀಪಕ ಅವರ ತಾಯಿ ಕಣ್ಣೀರು ಹಾಕಿದ್ದಾರೆ.
ವೀಡಿಯೋ ವೈರಲ್ ಆದ ನಂತರ ಮುಸ್ತಫಾ ಅದನ್ನು ಡಿಲೀಟ್ ಮಾಡಿ, ತನ್ನನ್ನು ತಾನು ಸಮರ್ಥಿಸಿಕೊಂಡು ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ನಂತರ ಆ ವೀಡಿಯೊವನ್ನು ಖಾಸಗಿಯಾಗಿ ಮಾಡಲಾಗಿತ್ತು.
ಸೋಮವಾರ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಇನ್ಫ್ಲುಯೆನ್ಸರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಉತ್ತರ ವಲಯ ಡಿಐಜಿಗೆ ಸೂಚಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ