ಮಧ್ಯಂತರ ಜಾಮೀನು ಸಿಕ್ಕರೂ ಕೇಜ್ರಿವಾಲ್‌ ದೆಹಲಿ ಸಿಎಂ ಕಚೇರಿಗೆ ಹೋಗುವಂತಿಲ್ಲ…

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಮಧ್ಯಂತರ ಜಾಮೀನು ನೀಡುವಾಗ ಮುಖ್ಯಮಂತ್ರಿ ಕಚೇರಿ ಹಾಗೂ ಸಚಿವಾಲಯಕ್ಕೆ ಹೋಗುವಂತಿಲ್ಲ, ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಕೇಜ್ರಿವಾಲ್‌ಗೆ ಸುಪ್ರಿಂ ಕೋರ್ಟ್‌ ಸೂಚಿಸಿದೆ.
ಮಧ್ಯಂತರ ಜಾಮೀನು ನೀಡುವಾಗ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತ ನೇತೃತ್ವದ ವಿಭಾಗೀಯ ಪೀಠವು “ಮೇಲ್ಮನವಿದಾರರು ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ರಾಷ್ಟ್ರೀಯ ಪಕ್ಷವೊಂದರ ನಾಯಕರಾಗಿದ್ದಾರೆ. ಕೇಜ್ರಿವಾಲ್‌ ವಿರುದ್ದ ಗಂಭೀರ ಆರೋಪ ಮಾಡಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅವರನ್ನು ದೋಷಿ ಎಂದು ಘೋಷಿಸಲಾಗಿಲ್ಲ. ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಮತ್ತು ಉದಾರ ದೃಷ್ಟಿಕೋನದಿಂದ ಜಾಮೀನು ನೀಡಲಾಗುತ್ತಿದೆ” ಎಂದು ಹೇಳಿದೆ.

ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್‌ ಕೆಲವು ಷರತ್ತುಗಳನ್ನು ವಿಧಿಸಿದೆ. ಕೇಜ್ರಿವಾಲ್‌ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಬ್ಬರ ಭದ್ರತೆ ಒದಗಿಸಬೇಕು. ದೆಹಲಿಯ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ದೆಹಲಿ ಸಚಿವಾಲಯಕ್ಕೆ ಅವರು ಭೇಟಿ ನೀಡಬಾರದು. ಅಗತ್ಯವಿಲ್ಲದ ಹೊರತಾಗಿ ಅವರು ಅಧಿಕೃತ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರಿಂದ ಒಪ್ಪಿಗೆ ಪಡೆಯುವುದು ಅಗತ್ಯ ಎಂದು ಪೀಠ ಹೇಳಿದೆ.
ಅಲ್ಲದೆ, ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಯಾವುದೇ ಹೇಳಿಕೆ ನೀಡುವಂತಿಲ್ಲ. ಪ್ರಕರಣದ ಯಾವುದೇ ಸಾಕ್ಷಿಯೊಂದಿಗೆ ಅವರು ಮಾತನಾಡುವಂತಿಲ್ಲ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ನೋಡುವಂತಿಲ್ಲ ಹಾಗೂ ಪಡೆಯುವಂತಿಲ್ಲ ಎಂದೂ ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement