ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತ ಎಣಿಕೆ ಸಿಬ್ಬಂದಿ ನೇಮಕಾತಿ ವಿಷಯದಲ್ಲಿ ಈಗ ಕಾನೂನು ಸಮರ ಶುರುವಾಗಿದೆ. ಮೇ 4ರಂದು ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಕೇವಲ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ (PSU) ನೌಕರರನ್ನು ಮಾತ್ರ ಮೇಲ್ವಿಚಾರಕರು ಮತ್ತು ಸಹಾಯಕರನ್ನಾಗಿ ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (TMC) ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಶನಿವಾರದಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ವಿಶೇಷ ದ್ವಿಸದಸ್ಯ ಪೀಠದಲ್ಲಿ ತುರ್ತು ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.
ಟಿಎಂಸಿ ಆಕ್ಷೇಪವೇನು?
ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ (CEO) ಹೊರಡಿಸಿರುವ ಆದೇಶದ ಪ್ರಕಾರ, ಪ್ರತಿ ಎಣಿಕೆ ಮೇಜಿನ ಬಳಿ ಕನಿಷ್ಠ ಒಬ್ಬ ಕೇಂದ್ರ ಸರ್ಕಾರಿ ಅಥವಾ ಪಿಎಸ್ಯು (PSU) ನೌಕರ ಇರಲೇಬೇಕು. ಇದನ್ನು ಟಿಎಂಸಿ ವಿರೋಧಿಸಿದೆ. ಚುನಾವಣಾ ಆಯೋಗದ ಕೈಪಿಡಿಯ (Handbook) ಪ್ರಕಾರ ಇಂತಹ ನೇಮಕಾತಿ ಕಡ್ಡಾಯವಲ್ಲ. ಮೈಕ್ರೋ ಅಬ್ಸರ್ವರ್ಗಳನ್ನು ಕೇಂದ್ರದಿಂದ ತರಬಹುದು, ಆದರೆ ಎಣಿಕೆ ಸಿಬ್ಬಂದಿಯನ್ನು ಹೀಗೆ ನೇಮಿಸುವುದು ಅಸಂಬದ್ಧ ಎಂದು ಹೇಳಿದೆ.ಇಂತಹ ನಿರ್ದೇಶನವನ್ನು ಕೇಂದ್ರ ಚುನಾವಣಾ ಆಯೋಗವೇ ನೀಡಬೇಕು, ರಾಜ್ಯದ ಹೆಚ್ಚುವರಿ ಸಿಇಒ ನೀಡುವಂತಿಲ್ಲ ಎಂದು ಅದು ಹೇಳಿದೆ. ಕೇಂದ್ರ ಸರ್ಕಾರವು ಒಂದು ರಾಜಕೀಯ ಪಕ್ಷದ ಅಧೀನದಲ್ಲಿರುವುದರಿಂದ, ಕೇಂದ್ರ ಸರ್ಕಾರಿ ನೌಕರರು ಆ ಪಕ್ಷದ ಪರವಾಗಿ ಕೆಲಸ ಮಾಡುವ ಸಾಧ್ಯತೆಯಿದೆ. ಇದು ಸಮಾನ ಅವಕಾಶದ (Level-playing field) ತತ್ವಕ್ಕೆ ವಿರುದ್ಧವಾಗಿದೆ ಎಂದು ಟಿಎಂಸಿ ವಾದಿಸಿದೆ.
ಹೈಕೋರ್ಟ್ನಲ್ಲಿ ಹಿನ್ನಡೆ
ಈ ಹಿಂದೆ ಕಲ್ಕತ್ತಾ ಹೈಕೋರ್ಟ್ ಟಿಎಂಸಿ ಅರ್ಜಿಯನ್ನು ವಜಾಗೊಳಿಸಿತ್ತು. ಸಿಬ್ಬಂದಿ ನೇಮಕಾತಿ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟಿದ್ದು ಎಂದು ಕೋರ್ಟ್ ಹೇಳಿತ್ತು. ಅಲ್ಲದೆ, ಮತ ಎಣಿಕೆ ಕೇಂದ್ರಗಳಲ್ಲಿ ಮೈಕ್ರೋ ಅಬ್ಸರ್ವರ್ಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಅಭ್ಯರ್ಥಿಗಳ ಏಜೆಂಟರು ಇರುವುದರಿಂದ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಕೇವಲ ಅನುಮಾನದ ಆಧಾರದ ಮೇಲೆ ನ್ಯಾಯಾಂಗ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದರಿಂದ ಟಿಎಂಸಿ ಈಗ ಸುಪ್ರೀಂ ಕೋರ್ಟ್ ಕದ ತಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ