ಆರ್‌ ಬಿಐನಿಂದ ರೆಪೋ ದರ ಕಡಿತ: ಗೃಹ ಸಾಲದ ಇಎಂಐ ಇಳಿಕೆ ನಿರೀಕ್ಷೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಬಡ್ಡಿ ದರವಾದ ರೆಪೋ ದರವನ್ನು 25 ಮೂಲಾಂಶಗಳಷ್ಟು (Basis Points) ಕಡಿತಗೊಳಿಸಿದೆ. ಇದರೊಂದಿಗೆ, ರೆಪೋ ದರವು ಶೇ. 5.5 ರಿಂದ ಶೇ. 5.25ಕ್ಕೆ ಇಳಿದಿದೆ ಎಂದು ಕೇಂದ್ರ ಬ್ಯಾಂಕ್‌ನ ಗವರ್ನರ್ ಸಂಜಯ ಮಲ್ಹೋತ್ರಾ ಅವರು ಇಂದು, ಶುಕ್ರವಾರ ಬೆಳಗ್ಗೆ ಪ್ರಕಟಿಸಿದ್ದಾರೆ.
ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ಆರ್‌ಬಿಐನ ವಿತ್ತ ನೀತಿ ಸಮಿತಿ (Monetary Policy Committee – MPC) ಯ ಮೂರು ದಿನಗಳ ಸಭೆಯ ನಂತರ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ.
ಗರಿಷ್ಠ ಮಟ್ಟದಿಂದ ಇಳಿದಿರುವ ಹಣದುಬ್ಬರ (Inflation) ದ ವಿರುದ್ಧ, ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿರುವ ರೂಪಾಯಿ ಮೌಲ್ಯ ಕುಸಿತವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
 ಈ ಹಿಂದೆ ಜೂನ್‌ನಲ್ಲಿ, ಹಣದುಬ್ಬರ ಇಳಿಕೆ ಕಂಡ ಹಿನ್ನೆಲೆಯ ರೆಪೋ ದರವನ್ನು ಶೇ. 6 ರಿಂದ ಶೇ. 5.5ಕ್ಕೆ ಇಳಿಸಲಾಗಿತ್ತು.
ರೆಪೋ ದರದ ಕಡಿತದಿಂದಾಗಿ, ಬ್ಯಾಂಕ್‌ಗಳು ನೀಡುವ ಸಾಲಗಳ ಬಡ್ಡಿ ದರಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮಾಸಿಕ ಇಎಂಐ (EMI) ಮೊತ್ತವು ಕಡಿಮೆಯಾಗುವ ಸಾಧ್ಯತೆಯಿದೆ.
2025 ರ ಕೊನೆಯ ತಿಂಗಳಿನಲ್ಲಿ ಮಾತನಾಡಿದ ಗವರ್ನರ್ ಮಲ್ಹೋತ್ರಾ ಅವರು, ಭೌಗೋಳಿಕ ಮತ್ತು ವ್ಯಾಪಾರ ಅನಿಶ್ಚಿತತೆಗಳ ಸವಾಲುಗಳಿದ್ದರೂ, ಈ ವರ್ಷದಲ್ಲಿ ಬಲಿಷ್ಠ ಬೆಳವಣಿಗೆ (Robust Growth) ಮತ್ತು ಸಹನೀಯ ಹಣದುಬ್ಬರ ಕಂಡುಬಂದಿದೆ ಎಂದು ತಿಳಿಸಿದರು. ಆರ್‌ಬಿಐ ತನ್ನ ವಿತ್ತೀಯ ನಿಲುವನ್ನು ತಟಸ್ಥ (Neutral) ಆಗಿ ಉಳಿಸಿಕೊಂಡಿದೆ ಮತ್ತು ಹೊಸ ಭರವಸೆ, ಉತ್ಸಾಹ ಹಾಗೂ ದೃಢ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇತರೆ ಪ್ರಮುಖ ನಿರ್ಧಾರಗಳು
ರೆಪೊ ದರದ ಜೊತೆಗೆ, ಎಂಪಿಸಿ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್‌ಡಿಎಫ್) ಅನ್ನು 5% ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ಅನ್ನು 5.5% ಗೆ ಹೊಂದಿಸಿದೆ.
ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (ಒಎಂಒ) ಹರಾಜಿನ ಮೂಲಕ 1 ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಲು ಸಹ ನಿರ್ಧಾರ ತೆಗೆದುಕೊಳ್ಳಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement