ನವದೆಹಲಿ: ದೇಶದಲ್ಲಿ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳು ಹಾಗೂ ವಿವಾದಗಳಿಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಾರ್ಟಿ) ಸಂಸ್ಥಾಪಕ ಅಭಿಜೀತ ದಿಪ್ಕೆ ಅವರು ಜೂನ್ 6 ರಂದು ದೆಹಲಿಯಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಲು ಅವರು ಜೂನ್ 6 ರಂದು ವಿದೇಶದಿಂದ ಭಾರತಕ್ಕೆ ಮರಳಲಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಪರೀಕ್ಷಾ ಪದ್ಧತಿಯಲ್ಲಿನ ಲೋಪದೋಷಗಳು ಮತ್ತು ನಿರಂತರ ವಿವಾದಗಳು ವಿದ್ಯಾರ್ಥಿ ವಲಯದಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನವನ್ನು ಉಂಟುಮಾಡಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
“ನಾವೆಲ್ಲರೂ ಒಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಶಾಂತಿಯುತವಾಗಿ ಧ್ವನಿ ಎತ್ತಬೇಕಾದ ಸಮಯ ಬಂದಿದೆ. ನಾವೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಿದರೆ, ಸರ್ಕಾರ ಖಂಡಿತವಾಗಿಯೂ ನಮ್ಮ ಬೇಡಿಕೆಯನ್ನು ಆಲಿಸಲೇಬೇಕಾಗುತ್ತದೆ,” ಎಂದು ದಿಪ್ಕೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಪೌರರೆಲ್ಲರೂ ಸಂವಿಧಾನದ ಚೌಕಟ್ಟಿನಡಿ ಒಂದಾಗಿ ಶಾಂತಿಯುತವಾಗಿ ಪ್ರತಿಭಟಿಸಬೇಕು. ನಮ್ಮ ಸಾಮೂಹಿಕ ಹೋರಾಟವು ಸಂಬಂಧಪಟ್ಟ ಅಧಿಕಾರಿಗಳು ಈ ಗಂಭೀರ ಸಮಸ್ಯೆಯನ್ನು ಗಮನಿಸುವಂತೆ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಸಲು ಕರೆ:
ತಮ್ಮ ಪ್ರಯಾಣದ ಯೋಜನೆಯನ್ನು ಪ್ರಕಟಿಸಿರುವ ಅಭಿಜೀತ ದಿಪ್ಕೆ, ಜೂನ್ 6ರ ಶನಿವಾರ ಮುಂಜಾನೆ ತಾನು ದೆಹಲಿಗೆ ಬಂದಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ ತಾವಿಳಿಯುವ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಬೇಕು ಎಂದು ಮನವಿ ಮಾಡಿರುವ ಅವರು, “ಅಲ್ಲಿಂದ ನಾವೆಲ್ಲರೂ ಒಟ್ಟಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿಯನ್ನು ಕೋರಲಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಯುವ ಸಮುದಾಯದ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ಯು ಸ್ಥಾಪನೆಯಾದ ದಿನದಿಂದಲೂ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸುತ್ತಿದ್ದು, ಜೂನ್ 6 ರಂದು ನಡೆಯಲಿರುವ ಈ ಪ್ರತಿಭಟನೆಯು ವಿದ್ಯಾರ್ಥಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ