ಕೇರಳ ರಾಜಕೀಯದಲ್ಲಿ ಸಂಚಲನ : ಪ್ರಧಾನಿ ಮೋದಿ ಭೇಟಿಗೂ ಮುನ್ನ ಎನ್‌ ಡಿಎ ಸೇರಿದ ಎರಡು ಪಕ್ಷಗಳು

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅಲ್ಲಿನ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇರಳಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಒಂದು ದಿನ ಮೊದಲು ಪ್ರಭಾವಿ ‘ಟ್ವೆಂಟಿ-20’ (Twenty20) ಪಕ್ಷವು ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಿಕೊಂಡಿದೆ.
ಗುರುವಾರ ಟ್ವೆಂಟಿ-20 ಪಕ್ಷದ ಮುಖ್ಯಸ್ಥ ಸಾಬು ಎಂ. ಜೇಕಬ್ ಅವರು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ ಚಂದ್ರಶೇಖರ ಅವರನ್ನು ಭೇಟಿ ಮಾಡಿ ಈ ನಿರ್ಧಾರವನ್ನು ಪ್ರಕಟಿಸಿದರು. ಇದದ ಜೊತೆಗೆ ಮಾಜಿ ಶಾಸಕ ಎ.ವಿ. ತಾಮರಕ್ಷನ್ ನೇತೃತ್ವದ ಜೆಎಸ್‌ಎಸ್ (JSS) ಪಕ್ಷದ ಬಣವೂ ಎನ್‌ಡಿಎ ಸೇರಿದೆ.
ಟ್ವೆಂಟಿ-20 ಪಕ್ಷವನ್ನು ಮೈತ್ರಿಕೂಟಕ್ಕೆ ಸ್ವಾಗತಿಸಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ರಾಜೀವ ಚಂದ್ರಶೇಖರ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಸಾಬು ಜೇಕಬ್ ಅವರ ಚಿಂತನೆಗಳು ಪೂರಕವಾಗಿವೆ. ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ವಿಕಸಿತ ಕೇರಳ ನಿರ್ಮಾಣಕ್ಕೆ ಇವರ ಸೇರ್ಪಡೆ ಹೆಚ್ಚಿನ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ತಿರುವನಂತಪುರಂನಲ್ಲಿ ಮೇಯರ್ ಪಟ್ಟ ಅಲಂಕರಿಸಿದ್ದ ಬಿಜೆಪಿಗೆ ಈ ಹೊಸ ಮೈತ್ರಿ ಆನೆಬಲ ತಂದಿದೆ.
2021ರ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಈ ಪಕ್ಷವು ಯಾವುದೇ ಸ್ಥಾನ ಗೆಲ್ಲದಿದ್ದರೂ, ಶೇ. 15.3 ರಷ್ಟು ಮತಗಳನ್ನು ಪಡೆಯುವ ಮೂಲಕ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿತ್ತು.
ಕೇರಳದ ಚುನಾವಣಾ ಪ್ರಚಾರಕ್ಕೆ ವೇಗ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಹೊಸ ರಾಜಕೀಯ ಸಮೀಕರಣವು ಎಡರಂಗ (LDF) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟಗಳಿಗೆ ಸವಾಲಾಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement