ಭೀಕರ ಬೆಂಕಿಯ ನಡುವೆ ತನ್ನೆರಡು ನಾಯಿಗಳನ್ನು ರಕ್ಷಿಸಿದ ಮಹಿಳೆ -ವೀಡಿಯೊ ವೈರಲ್‌

ಫಿಲಿಪೈನ್ಸ್‌ನ ಸೆಬು ದ್ವೀಪದಲ್ಲಿರುವ ಮ್ಯಾಂಡೌ ಸಿಟಿಯ ಗೈಜೊದಲ್ಲಿ ಬುಧವಾರ ಮುಂಜಾನೆ ವಸತಿ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಇದರ ಮಧ್ಯದಲ್ಲೇ ಒಬ್ಬ ಧೈರ್ಯಶಾಲಿ ಮಹಿಳೆ ಆತಂಕ ಮತ್ತು ಅಪಾಯವನ್ನು ಎದುರಿಸಿ ತನ್ನ ಎರಡು ನಾಯಿಗಳ ಜೀವ ಉಳಿಸಿದ್ದಾರೆ.
ಈ ಹೃದಯ ಕಲಕುವ ಕ್ಷಣದಲ್ಲಿ, ಬೆಂಕಿ ಒಮ್ಮೆಲೇ ವ್ಯಾಪಿಸುತ್ತಿದ್ದಾಗ, 32 ವರ್ಷದ ಈಯಿ ಮೇ ಲೀ ಮನಿನೊ ಎಂಬ ಮಹಿಳೆ ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದರು. ಅಲ್ಲದೆ,  ಅಸಾಮಾನ್ಯ ಧೈರ್ಯ ಪ್ರದರ್ಶಿಸಿ ಆ ನಾಯಿಗಳನ್ನು ಉಳಿಸಲು ಯಶಸ್ವಿಯಾಗಿದ್ದಾರೆ.
ನಾಯಿಗಳನ್ನು ಕಾಪಾಡಲು ತನ್ನ ಸುರಕ್ಷತೆ ಲೆಕ್ಕಿಸಲಿಲ್ಲ
ಮೂರು ಅಂತಸ್ತಿನ ಕಟ್ಟಡದ ಗೋಡೆಗಳನ್ನು ಬೆಂಕಿಯ ಜ್ವಾಲೆಗಳು ಆವರಿಸುತ್ತಿದ್ದರೂ, ಈ ಧೈರ್ಯಶಾಲಿ ಮಹಿಳೆ ಶಾಂತವಾಗಿದ್ದರು. ಅವರು ತಮ್ಮ ಸ್ವಂತ ಸುರಕ್ಷತೆಗಿಂತ ತಮ್ಮ ಎರಡು ಪೊಮೆರೇನಿಯನ್ (Pomeranian) ನಾಯಿಗಳನ್ನು ಕಾಪಾಡುವುದಕ್ಕೆ ಆದ್ಯತೆ ನೀಡಿದರು. ಬೆಂಕಿಯ ಜ್ವಾಲೆ ಮಧ್ಯೆಯೇ ಒಂದೊಂದಾಗಿ ನಾಯಿಮರಿಗಳನ್ನು ಕೆಳಗೆ ನಿಂತಿದ್ದ ಅಗ್ನಿಶಾಮಕ ಸಿಬ್ಬಂದಿ ಮತ್ತು ನೆರೆಹೊರೆಯವರಿಗೆ ಮೇಲಿನಿಂದ ಎಸೆದರು. ಕೆಳಗಿದ್ದವರು ಆ ನಾಯಿಗಳನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ  ವೀಡಿಯೊದಲ್ಲಿ, ಮೇಲಿನ ಮಹಡಿಗಳಿಂದ ದಟ್ಟವಾದ ಕಪ್ಪು ಹೊಗೆಯಿಂದ ತುಂಬಿದ ಬಾಲ್ಕನಿಯಲ್ಲಿ ಕುಳಿತಿರುವ ಮನಿನೊಗೊ, ತನ್ನ ಹೆದರಿದ ನಾಯಿಗಳನ್ನು ಹಿಡಿದು, ಒಂದೊಂದಾಗಿ ಕೆಳಗೆ ನಿಂತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ದಾರಿಹೋಕರ ಕೈಗಳಿಗೆ ಎಸೆಯುವುದನ್ನು ಕಾಣಬಹುದು.

ನಾಯಿಗಳನ್ನು ಸುರಕ್ಷಿತವಾಗಿ ಕೆಳಗಿಳಿಸಿದ ನಂತರ, ಆಕೆ ತೂಗಾಡುತ್ತಿದ್ದ ಅಗ್ನಿಶಾಮಕ ಟ್ರಕ್‌ನ ಏಣಿಯನ್ನು ಹಿಡಿದು ಕೆಳಗೆ ಇಳಿದರು. ಈ ಅಪಾಯಕಾರಿ ಸಾಹಸವು ವೀಕ್ಷಕರನ್ನು ಬೆಚ್ಚಿಬೀಳಿಸಿತು.
ಮನಿನೊಗೊ ಜಿಗಿದು ಕೆಳಗೆ ಇಳಿದ ಕೆಲವೇ ಸೆಕೆಂಡುಗಳಲ್ಲಿ, ಬೆಂಕಿಯು ಆಕೆಯಿದ್ದ ಸ್ಥಳವನ್ನೂ ಆವರಿಸಿತು.
ಮನಿನೊಗೊ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು, ಆದರೆ ಅವರ ನಾಯಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಮ್ಯಾಂಡೌ ಅಗ್ನಿಶಾಮಕ ದಳದ ತಂಡಗಳು 40 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು, ಪಕ್ಕದ ಕಟ್ಟಡಗಳಿಗೆ ಹರಡುವುದನ್ನು ತಡೆಯಲಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement