ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಭಾನುವಾರ ತಾನು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾಗಿ ಹೇಳಿದ್ದಾರೆ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಯಾರದ್ದೋ ಮಾನಹಾನಿ ಮಾಡಲು ನಾನು ಬೇಡಿಕೆಗಳನ್ನು ಮುಂದಿಟ್ಟಿಲ್ಲ ಎಂದು ಒತ್ತಿ ಹೇಳಿದ್ದಾರೆ.
ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಂದು ಅವರ ಕುಟುಂಬದ ಭದ್ರಕೋಟೆಯಾದ ದೌಸಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಚಿನ್ ಪೈಲಟ್, “ನನಗೆ ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ನಾನು ಸರ್ಕಾರದಲ್ಲಿದ್ದಾಗ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ನಾನು ಯಾವಾಗಲೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.
ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, “ಪ್ರತಿ ತಪ್ಪು ಸಹ ಶಿಕ್ಷೆಯನ್ನು ಬಯಸುತ್ತದೆ” ಎಂದು ಹೇಳಿದರು. ಯುವಕರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಿಂದ ನಾವು ದಿವಾಳಿಯಾಗುವುದಿಲ್ಲ. ನಾವು ಯಾವಾಗಲೂ ಅವರಿಗೆ ಸಹಾಯ ಮಾಡಬೇಕು. ನಾನು ಯಾವುದೇ ಬೇಡಿಕೆಯನ್ನು ಮುಂದಿಟ್ಟಿದ್ದರೆ ಅದು ಜನರಿಗಾಗಿ ಎಂದು ಅವರು ಹೇಳಿದರು.
ಇವತ್ತಲ್ಲದಿದ್ದರೆ ನಾಳೆ ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದ ಕಾಂಗ್ರೆಸ್ ನಾಯಕ, ಮುಂದೆಯೂ ಜನರ ಹಕ್ಕುಗಳನ್ನು ವಿಶೇಷವಾಗಿ ಯುವ ಸಮೂಹದ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ನಾನು ಜನರ ಧ್ವನಿ ಮತ್ತು ನನ್ನ ಒಳಗಿನ ಆತ್ಮವನ್ನು ಕೇಳುತ್ತೇನೆ. ನನ್ನ ಆಂತರಿಕ ಆತ್ಮದ ಧ್ವನಿಯು ಜನರ ಧ್ವನಿಯಾಗಿದೆ” ಎಂದು ಸಚಿನ್ ಪೈಲಟ್ ಹರ್ಷೋದ್ಗಾರಗಳ ನಡುವೆ ಹೇಳಿದರು.
ರಾಜಕೀಯದಲ್ಲಿ ಅಭಿಪ್ರಾಯಗಳನ್ನು ಮೂಡಿಸುವುದು ಬಹಳ ಮುಖ್ಯ ಎಂದ ಅವರು, ಆಡಳಿತದ ಅವಧಿಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಅದನ್ನು ಸರಿಪಡಿಸಬೇಕು ಎಂದರು. ‘ನಮ್ಮ ಆಡಳಿತದಲ್ಲಿ ಏನಾದರೂ ಲೋಪವಿದ್ದರೆ ಬೇರೆಯವರನ್ನು ದೂಷಿಸದೆ ಅದನ್ನು ಸರಿಪಡಿಸಿಕೊಳ್ಳಬೇಕು… ನಾನು ಯಾರದ್ದೋ ಮಾನಹಾನಿ ಮಾಡಲು ನನ್ನ ಬೇಡಿಕೆಗಳನ್ನು ಮುಂದಿಟ್ಟಿಲ್ಲ.. ರಾಜಕೀಯದಲ್ಲಿ ಯಾರೇ ಆಗಲಿ ಅವರ ಅಭಿಪ್ರಾಯ ವ್ಯಕ್ತಪಡಿಸುವುದು ಬಹಳ ಮುಖ್ಯ…’ ಎಂದು ಅವರು ಹೇಳಿದರು.
ಬಿಜೆಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ತನಗಿಂತ ಹಿರಿಯರು. ಅವರ ವಿರುದ್ಧ ಯಾವುದೇ ಅವಹೇಳನಕಾರಿ ಪದಗಳನ್ನು ಬಳಸಿಲ್ಲ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. “ನಾನು ವಸುಂಧರಾ ರಾಜೆ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವುದಿಲ್ಲ, ಆದರೆ 365 ದಿನಗಳ ಕಾಲ ಅವರನ್ನು ವಿರೋಧಿಸುತ್ತೇನೆ” ಎಂದು ಅವರು ಹೇಳಿದರು.
ಸಚಿನ್ ಪೈಲಟ್ ತಮ್ಮ ತಂದೆ ರಾಜೇಶ್ ಪೈಲಟ್ ಬಗ್ಗೆ ಮಾತನಾಡುತ್ತಾ, ಅವರು ರೈತರು ಮತ್ತು ಹಿಂದುಳಿದವರ ಪರವಾಗಿ ಧ್ವನಿ ಎತ್ತಿದರು ಎಂದು ನೆನಪಿಸಿಕೊಂಡರು. ರಾಜೇಶ್ ಪೈಲಟ್ ಜೂನ್ 11, 2000 ರಂದು ಅಪಘಾತದಲ್ಲಿ ಸಾಯುವ ಮೊದಲು ದೌಸಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು.
“ನನ್ನ ತಂದೆ ದೇಶಕ್ಕಾಗಿ ಹೋರಾಡಿದ್ದಾರೆ. ಅವರು ವಾಯುಪಡೆಗಾಗಿ ಜೆಟ್ ವಿಮಾನಗಳನ್ನು ಹಾರಿಸಿದ್ದಾರೆ. ಅವರು ಯಾವುದೇ ಸ್ಥಾನ ಹೊಂದಿದ್ದರೂ ಅಥವಾ ಇಲ್ಲದಿದ್ದರೂ ಅವರು ತಮ್ಮ ಹೃದಯದಿಂದ ಮಾತನಾಡಿದ್ದಾರೆ. ಇಂದು ನಮಗೆ ಅವರಂತೆ ಹೃದಯದಿಂದ ಮಾತನಾಡುವ ನಾಯಕರ ಅಗತ್ಯವಿದೆ” ಎಂದು ಸಚಿನ್ ಪೈಲಟ್ ಹೇಳಿದರು.
ರಾಜಸ್ಥಾನದ ಕ್ಯಾಬಿನೆಟ್ ಸಚಿವರಾದ ಪ್ರತಾಪ್ ಸಿಂಗ್ ಖಚರಿಯಾವಾಸ್, ಮಮತಾ ಭೂಪೇಶ್, ಮುರಾರಿ ಲಾಲ್ ಮೀನಾ, ಹೇಮಾರಾಮ್ ಚೌಧರಿ ಮತ್ತು ಶೀಶ್ ರಾಮ್ ಓಲಾ ಅವರು ದೌಸಾದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ