ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯವರ ನಡುವೆ ಜಗಳವಾಗುವುದು ಸಾಮಾನ್ಯ. ಆದರೆ, ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಕಳೆದ ವಾರ ನಡೆದ ಘಟನೆ ಮಾತ್ರ ತೀರಾ ವಿಭಿನ್ನವಾಗಿದೆ. ಬೆಕ್ಕಿನ ಮರಿಗಳ ವಿಚಾರವಾಗಿ ಆರಂಭವಾದ ಜಗಳವೊಂದು ಬೀದಿ ರಂಪಾಟಕ್ಕೆ ಕಾರಣವಾಗಿ, ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ಪ್ರಸಂಗ ನಡೆದಿದೆ ಎಂದು ವರದಿಯಾಗಿದೆ.
ಈ ವಿವಾದದ ಮೂಲವೇ ವಿಚಿತ್ರವಾಗಿತ್ತು. ಮಹಿಳೆಯೊಬ್ಬರು ತನ್ನ ಮನೆಯ ಹೆಣ್ಣು ಬೆಕ್ಕು ಗರ್ಭಿಣಿಯಾಗಲು ಪಕ್ಕದ ಮನೆಯಲ್ಲಿ ಸಾಕಿದ್ದ ಗಂಡು ಬೆಕ್ಕೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು…! ಇತ್ತೀಚೆಗೆ ಆ ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿದಾಗ, ಆ ಮರಿಗಳ ಜವಾಬ್ದಾರಿಯನ್ನು ಹೊರಬೇಕೆಂದು ಅವರು ಪಕ್ಕದ ಮನೆಯವರ ಮೇಲೆ ಒತ್ತಡ ಹೇರಿದ್ದಾರೆ. ಈ ವಿಚಾರವಾಗಿ ಆರಂಭವಾದ ಜಗಳ ನಂತರ ಪರಸ್ಪರ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದಾಟದ ವರೆಗೆ ಬೆಳೆದು ಅತಿರೇಕಕ್ಕೆ ತಲುಪಿದೆ.
ಬೆಕ್ಕಿನ ಮರಿ ಎಸೆದು ಆಕ್ರೋಶ
ಜಗಳ ತಾರಕಕ್ಕೇರಿದಾಗ, ಕೋಪಗೊಂಡ ಹೆಣ್ಣು ಬೆಕ್ಕಿನ ಒಡತಿ, ತೀರಾ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಅವರು ಪುಟ್ಟ ಮರಿಯೊಂದನ್ನು ಎತ್ತಿ ನೆರೆಯವರ ಮನೆಯ ಬಳಿ ಎಸೆದಿದ್ದಾರೆ. ಈ ಕೃತ್ಯದಿಂದ ಉಭಯ ಕುಟುಂಬಗಳ ನಡುವಿನ ಪರಿಸ್ಥಿತಿ ಇನ್ನಷ್ಟು ಸ್ಫೋಟಕವಾಯಿತು. ಇದು ಸುತ್ತಮುತ್ತಲಿನ ನಿವಾಸಿಗಳ ಗನ ಸೆಳೆಯಿತು. ಅಸಹಾಯಕ ಬೆಕ್ಕಿನ ಮರಿಗಳು ಈ ಗೊಂದಲದ ನಡುವೆ ಸಿಲುಕಿ ಪರದಾಡಿದವು.
ಪೊಲೀಸರ ಮಧ್ಯಪ್ರವೇಶ…
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಗಂಡು ಬೆಕ್ಕಿನ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯ ಗಸ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಉಭಯ ಬಣಗಳನ್ನು ಸಮಾಧಾನಪಡಿಸಿ ನಾಲ್ಕು ಬೆಕ್ಕಿನ ಮರಿಗಳಲ್ಲಿ ಎರಡೆರಡು ಬೆಕ್ಕುಗಳನ್ನು ಎರಡೂ ಮನೆಯವರಿಗೆ ಹಂಚಿ ಪ್ರಕರಣವನ್ನು ಇತ್ಯರ್ಥಪಡಿಸಿ ಗಲಾಟೆಯನ್ನು ತಿಳಿಗೊಳಿಸಿದರು. ಈ ಬಗ್ಗೆ ಯಾವುದೇ ಔಪಚಾರಿಕ ದೂರು (FIR) ದಾಖಲಾಗಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ