ತುಮಕೂರು : ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಲ್ಕೆರೆ ಗ್ರಾಮದಲ್ಲಿ ಶನಿವಾರ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅರ್ಚಕರೊಬ್ಬರು ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಅಲ್ಕೆರೆ ಗ್ರಾಮದ ನಿವಾಸಿ ಶಿವಣ್ಣ (40) ಮತ್ತು ಅವರ ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ (5) ಎಂದು ಗುರುತಿಸಲಾಗಿದೆ. ಶಿವಣ್ಣ ಅವರು ಸ್ಥಳೀಯ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುವುದರ ಜೊತೆಗೆ ಖಾಸಗಿ ಕಂಪನಿಯೊಂದರ ಉದ್ಯೋಗಿಯೂ ಆಗಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಶನಿವಾರ ಬೆಳಿಗ್ಗೆ ಯಾರೂ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಇಬ್ಬರು ಮಕ್ಕಳು ಮತ್ತು ಶಿವಣ್ಣ ಶವವಾಗಿ ಪತ್ತೆಯಾಗಿದ್ದಾರೆ. ಶಿವಣ್ಣ ಮೊದಲು ಮಕ್ಕಳಿಗೆ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಕಾರಣವೇನು?
ಪೊಲೀಸ್ ಮೂಲಗಳ ಪ್ರಕಾರ, ದಂಪತಿಗಳ ನಡುವಿನ ಕೌಟುಂಬಿಕ ಕಲಹ ಮತ್ತು ಪತ್ನಿಯ ಅನೈತಿಕ ಸಂಬಂಧ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಶಿವಣ್ಣನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ಇದು ದಂಪತಿಗಳ ನಡುವೆ ನಿರಂತರ ಜಗಳಕ್ಕೆ ಕಾರಣವಾಗಿತ್ತು.
ಸುಮಾರು ಒಂದು ವಾರದ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕಳುಹಿಸಿದ್ದರು. ಮನೆಗೆ ಬಂದ ಮರುದಿನವೇ, ಶಿವಣ್ಣ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆಕೆ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಮತ್ತೆ ಪರಾರಿಯಾಗಿದ್ದಳು ಎನ್ನಲಾಗಿದೆ.
ಪತ್ನಿಯ ಈ ನಡೆಯಿಂದ ತೀವ್ರ ಮಾನಸಿಕ ಖಿನ್ನತೆ ಮತ್ತು ನೋವಿಗೆ ಒಳಗಾಗಿದ್ದ ಶಿವಣ್ಣ, ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. “ವೈವಾಹಿಕ ಜೀವನದ ಬಿಕ್ಕಟ್ಟಿನಿಂದ ಉಂಟಾದ ತೀವ್ರ ಭಾವನಾತ್ಮಕ ಒತ್ತಡವೇ ಈ ಘಟನೆಗೆ ಪ್ರೇರಣೆ ನೀಡಿರುವ ಸಾಧ್ಯತೆಯಿದೆ, ನಾವು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ