ಐದು ದಶಕಗಳ ಹಿಂದೆ ʼಬೆಳ್ಳನೆ ಬೆಳಗಾಯಿತು…..’ ಸೇರಿ ಎರಡು ಗೀತೆಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಕೇಳಿ..

ಬೆಂಗಳೂರು: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿದೆ. ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಲತಾ ಅವರ ಕೊಡುಗೆ ಅಪಾರ.
36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡುವ ಮೂಲಕ ಅವರು ಎಲ್ಲರ ಹೃದಯ ಗೆದ್ದಿದ್ದರು. ಲತಾ ಅವರ ಹಾಡಿಗೆ ತಲೆದೂಗದವರೇ ಇಲ್ಲ ಎಂದರೂ ಅತಿಶಯೋಕ್ತಿ ಆಗಲಾರದು.

ಲತಾ ಮಂಗೇಶ್ಕರ್​ ಕನ್ನಡ ಸಿನೆಮಾದಲ್ಲಿಯೂ ಹಾಡಿದ್ದಾರೆ. ಅವರು ಕನ್ನಡ ಸಿನಿಮಾಗಳಿಗೆ ಹಾಡಿದ್ದು ಬಹಳ ಕಡಿಮೆ. ಆದರೂ ಎರಡು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ‘ಬೆಳ್ಳನೆ ಬೆಳಗಾಯಿತು..’ ಸೂಪರ್‌ ಹಿಟ್‌ ಹಾಡು. 5 ದಶಕದ ಹಿಂದಿನ ಹಾಡಿಗೆ ಈಗಿನ ಪೀಳಿಗೆಯವರೂ ತಲೆದೂಗುತ್ತಾರೆ.
‘1967ರಲ್ಲಿ ತೆರೆಕಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದಲ್ಲಿ ಲತಾ ಅವರು ಹಾಡಿದ್ದರು, ಈ ಚಿತ್ರಕ್ಕೆ ಲಕ್ಷ್ಮಣ್​ ಬರಲೇಕರ್​ ಸಂಗೀತ ನೀಡಿದ್ದರು. ಬಿ.ಟಿ. ಅಥಣಿ ಗುರುಬಾಲ ಅವರ ನಿರ್ದೇಶನದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ಮೂಡಿಬಂದಿತ್ತು. ಆ ಸಿನಿಮಾದ ಎರಡು ಹಾಡುಗಳಿಗೆ ಲತಾ ಮಂಗೇಶ್ಕರ್​ ಧ್ವನಿ ನೀಡಿದ್ದರು. ‘ಬೆಳ್ಳನೆ ಬೆಳಗಾಯಿತು..’ ಮತ್ತು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ..’ ಗೀತೆಗಳನ್ನು ಲತಾ ಹಾಡಿದ್ದರು. ಅವರ ಸಹೋದರಿಯರಾದ ಆಶಾ ಭೋಸ್ಲೆ ಮತ್ತು ಉಷಾ ಮಂಗೇಶ್ಕರ್​ ಕೂಡ ಈ ಸಿನಿಮಾದಲ್ಲಿ ತಲಾ ಒಂದೊಂದು ಹಾಡನ್ನು ಹಾಡಿದರು. ಇದರಲ್ಲಿ ‘ಬೆಳ್ಳನೆ ಬೆಳಗಾಯಿತು..’ ಹಾಡು ಈಗಲೂ ತನ್ನ ಖದರು ಉಳಿಸಿಕೊಂಡಿದೆ.

3.9 / 5. 8

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement