
ಗುರುಗ್ರಾಮ: ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ (Cross-voting) ಮಾಡಿದ ಆರೋಪದ ಮೇಲೆ ಹರಿಯಾಣದ ಐವರು ಕಾಂಗ್ರೆಸ್ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಅಮಾನತುಗೊಳಿಸಲಾಗಿದೆ. ಈ ಅಡ್ಡಮತದಾನದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಕರಮವೀರ ಬೌಧ್ ಅವರ ಗೆಲುವು ಬಹುತೇಕ ಕೈತಪ್ಪುವ ಹಂತಕ್ಕೆ ತಲುಪಿತ್ತು.
ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಶೆಲ್ಲಿ ಚೌಧರಿ (ನಾರಾಯಣಗಢ), ರೇಣು ಬಾಲಾ (ಸಧೌರಾ), ಮೊಹಮ್ಮದ್ ಇಲ್ಯಾಸ್ (ಪುನ್ಹಾನಾ), ಮೊಹಮ್ಮದ್ ಇಸ್ರೇಲ್ (ಹತಿನ್) ಹಾಗೂ ಜರ್ನೈಲ್ ಸಿಂಗ್ (ರತಿಯಾ, ಫತೇಹಾಬಾದ್) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಅಮಾನತುಗೊಳಿಸಲಾಗಿದೆ ಈ ಐವರು ಶಾಸಕರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ ನಂದಾಲ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಬಲವಾಗಿ ನಂಬಿದೆ.
ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದ್ರ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಸಂಸದ ಧರ್ಮಪಾಲ ಮಲಿಕ್ ನೇತೃತ್ವದ ಶಿಸ್ತು ಸಮಿತಿಯು ಈ ಕ್ರಮವನ್ನು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ಈ ಶಾಸಕರಿಗೆ ‘ಕಾರಣ ಕೇಳಿ ನೋಟಿಸ್’ ನೀಡಲಾಗಿತ್ತು. ಶಾಸಕರು ನೀಡಿದ ಉತ್ತರಗಳನ್ನು ಪರಿಶೀಲಿಸಿದ ಸಮಿತಿಯು ಅಮಾನತಿಗೆ ಸೂಚಿಸಿದೆ.
ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ (HPCC) ಸಲ್ಲಿಸಿದ ವರದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದನೆ ನೀಡಿದ ತಕ್ಷಣವೇ, ಐವರು ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಅಮಾನತುಗೊಂಡ ಐವರಲ್ಲಿ ಮೂವರು ಶಾಸಕರಾದ ಶೆಲ್ಲಿ ಚೌಧರಿ, ರೇಣು ಬಾಲಾ ಮತ್ತು ಜರ್ನೈಲ್ ಸಿಂಗ್ ಅವರು ನೋಟಿಸ್‌ಗೆ ಲಿಖಿತ ಉತ್ತರ ನೀಡಿದ್ದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ಆದರೆ, ಮೊಹಮ್ಮದ್ ಇಲ್ಯಾಸ್ ಮತ್ತು ಮೊಹಮ್ಮದ್ ಇಸ್ರೇಲ್ ಅವರು ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.



ನಿಮ್ಮ ಕಾಮೆಂಟ್ ಬರೆಯಿರಿ