

(ದೇಶಾದ್ಯಂತ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಆ ನಿಮಿತ್ತ ಈ ಲೇಖನ.)
ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ದೇಶಾದ್ಯಂತ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಆಚರಿಸಲಾಗುತ್ತದೆ. ಪುಸ್ತಕಗಳ ಕಡೆಗೆ ಜನಸಾಮಾನ್ಯರ ಗಮನ ಸೆಳೆಯುವುದು, ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವನ್ನು ಪುಸ್ತಕಗಳ ಮೂಲಕ ಜನರಲ್ಲಿ ಮೂಡಿಸುವುದು, ಮಕ್ಕಳ ಸಾಹಿತ್ಯದ ಪ್ರಕಟಣೆಗೆ ಉತ್ತೇಜನ ನೀಡುವುದು ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ಸಮುದಾಯ ಮತ್ತು ಸಮಾಜದ ಎಲ್ಲ ವರ್ಗದ ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವುದೇ ಈ ಪುಸ್ತಕ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ.
ಪುಸ್ತಕಗಳಿಲ್ಲದ ಕೊಠಡಿಯು ಆತ್ಮವಿಲ್ಲದ ಶರೀರಕ್ಕೆ ಸಮಾನ ಎಂಬ ಮಾತು ಅಕ್ಷರಶಃ ಸತ್ಯ. ನಾಗರಿಕತೆಯ ಇತಿಹಾಸದ ವಿಕಾಸದಲ್ಲಿ ಪುಸ್ತಕಗಳ ಪಾತ್ರ ಬಹುದೊಡ್ಡದು. ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಲ್ಲೂ ಓದುವ ಹವ್ಯಾಸವನ್ನು ಮೂಡಿಸಲು ಮತ್ತು ಜ್ಞಾನಾಧಾರಿತ ಸದೃಢ ಸಮಾಜವನ್ನು ಸ್ಥಾಪಿಸಲು ಈ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ.
ಭಾರತದ ಪ್ರಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನವೆಂಬರ್ 14ರಂದು, ಮಕ್ಕಳ ದಿನಾಚರಣೆಯಂದೇ ಈ ಜ್ಞಾನ ಸಪ್ತಾಹ ಆರಂಭವಾಗುವುದು ಇದರ ವಿಶೇಷತೆಯಾಗಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಬಾಲ್ಯದಿಂದಲೇ ಅಕ್ಷರ ಪ್ರೇಮ ಹಾಗೂ ಜ್ಞಾನದ ಹಸಿವನ್ನು ಮೂಡಿಸುವುದು ಈ ಪುಸ್ತಕ ಸಪ್ತಾಹದ ಮೂಲ ಆಶಯವಾಗಿದೆ.
ಹಿನ್ನೆಲೆ:
ಜಾಗತಿಕವಾಗಿ ಪುಸ್ತಕ ಮತ್ತು ಗ್ರಂಥಾಲಯ ಸಪ್ತಾಹಗಳ ಇತಿಹಾಸವನ್ನು ಗಮನಿಸಿದರೆ, ಮೊಟ್ಟಮೊದಲ ಬಾರಿಗೆ ಅಮೆರಿಕದಲ್ಲಿ ಅಮೆರಿಕನ್ ಲೈಬ್ರರಿ ಅಸೋಸಿಯೇಷನ್ ವತಿಯಿಂದ ಜನರಲ್ಲಿ ಓದುವ ಆಸಕ್ತಿಯನ್ನು ಬೆಳೆಸಲು 1958ರಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸನ್ನು ಕಂಡು ಜಗತ್ತಿನ ಹಲವಾರು ದೇಶಗಳು ಇದನ್ನು ತಮ್ಮ ದೇಶಗಳಲ್ಲಿಯೂ ಅಳವಡಿಸಿಕೊಂಡವು.
ಭಾರತದಲ್ಲಿ ಗ್ರಂಥಾಲಯ ಚಳವಳಿ ಮತ್ತು ಪುಸ್ತಕ ಸಂಸ್ಕೃತಿಯ ಪರಂಪರೆಗೆ ಸುದೀರ್ಘ ಇತಿಹಾಸವಿದೆ. ಭಾರತದ ಗ್ರಂಥಾಲಯ ಪಿತಾಮಹರಾದ ಡಾ. ಶಿಯಾಳಿ ರಾಮಾಮೃತ ರಂಗನಾಥನ್ (ಡಾ. ಎಸ್.ಆರ್. ರಂಗನಾಥನ್) ಅವರು ದೇಶದ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು. ಗ್ರಂಥಾಲಯ ಕ್ಷೇತ್ರಕ್ಕೆ ಅವರ ಕೊಡುಗೆ ಮತ್ತು ಗ್ರಂಥಾಲಯಗಳ ಮಹತ್ವವನ್ನು ಗೌರವಿಸುವ ಸಲುವಾಗಿ ಭಾರತೀಯ ಗ್ರಂಥಾಲಯ ಸಂಸ್ಥೆಯು 1968ರಲ್ಲಿ ಮೊದಲ ಬಾರಿಗೆ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲು ಕರೆ ನೀಡಿತು.
ಮತ್ತೊಂದೆಡೆ, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ, ನೆಹರೂ ಅವರ ಕನಸಿನ ಕೂಸಾದ ನ್ಯಾಷನಲ್ ಬುಕ್ ಟ್ರಸ್ಟ್ ಕೂಡ ಭಾರತದಲ್ಲಿ ಪುಸ್ತಕ ಪ್ರಕಟಣೆ ಮತ್ತು ಓದುವಿಕೆಯನ್ನು ಉತ್ತೇಜಿಸಲು ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಗ್ರಂಥಾಲಯಗಳು ಮತ್ತು ಪ್ರಕಾಶನ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಕವಾಗಿ ಪುಸ್ತಕ ಮೇಳಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಏಳು ದಿನಗಳ ಕಾಲ ಪುಸ್ತಕ ಪ್ರೇಮಿಗಳ ಉತ್ಸವವನ್ನಾಗಿ ಹಲವು ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಸಂಸ್ಥೆಯು 1957ರ ಆಗಸ್ಟ್ 1ರಂದು ಆರಂಭಗೊಂಡಿತು.
ಉದ್ದೇಶಗಳು:
ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಆಚರಿಸುವುದರ ಹಿಂದೆ ಹಲವಾರು ಉದಾತ್ತ ಆಶಯಗಳಿವೆ. ಅವುಗಳೆಂದರೆ:
1) ಓದುವ ಸಂಸ್ಕೃತಿಯ ಪುನರುತ್ಥಾನ:
ಇಂದಿನ ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಭರಾಟೆಯಿಂದಾಗಿ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಗಣನೀಯವಾಗಿ ಕುಂಠಿತವಾಗಿದೆ. ಡಿಜಿಟಲ್ ಜಗತ್ತಿನ ಮಾಯಾಜಾಲದಲ್ಲಿ ಸಿಲುಕಿರುವ ಜನರನ್ನು ಮತ್ತೆ ಭೌತಿಕ ಪುಸ್ತಕಗಳತ್ತ ಸೆಳೆಯುವುದು ಈ ಸಪ್ತಾಹದ ಪ್ರಮುಖ ಆಶಯವಾಗಿದೆ.
2) ಗ್ರಂಥಾಲಯಗಳ ಸದ್ಬಳಕೆ:
ಲಕ್ಷಾಂತರ ಪುಸ್ತಕಗಳನ್ನು ಜೋಡಿಸಿಟ್ಟಿರುವ ಸಾರ್ವಜನಿಕ ಹಾಗೂ ಶಾಲಾ-ಕಾಲೇಜುಗಳ ಗ್ರಂಥಾಲಯಗಳಿಗೆ ಭೇಟಿ ನೀಡುವಂತೆ ಜನರನ್ನು ಪ್ರೇರೇಪಿಸುವುದರ ಜೊತೆಗೆ, ಅಲ್ಲಿನ ಜ್ಞಾನಭಂಡಾರದ ಸದ್ಬಳಕೆ ಮಾಡುವಂತೆ ಜನತೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ.
3) ಸಾಕ್ಷರತೆ ಮತ್ತು ಜ್ಞಾನ ಪ್ರಸಾರ:
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಪುಸ್ತಕಗಳ ಮಹತ್ವವನ್ನು ತಲುಪಿಸುವ ಮೂಲಕ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವುದು ಇದರ ಆಶಯವಾಗಿದೆ.
4) ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಪ್ರೋತ್ಸಾಹ:
ಉದಯೋನ್ಮುಖ ಲೇಖಕರನ್ನು ಪರಿಚಯಿಸುವುದು, ಉತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸುವುದು ಮತ್ತು ಪ್ರಕಾಶನ ಉದ್ಯಮಕ್ಕೆ ಬೆಂಬಲ ನೀಡುವುದು ಕೂಡ ಈ ಸಪ್ತಾಹದ ಮುಖ್ಯ ಆಶಯಗಳಾಗಿವೆ.
ವಿವಿಧ ಚಟುವಟಿಕೆಗಳು:
ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಸಾರ್ವಜನಿಕ ಗ್ರಂಥಾಲಯಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ:
1) ಪುಸ್ತಕ ಪ್ರದರ್ಶನ ಮತ್ತು ಮಾರಾಟ:
ಅಪರೂಪದ ಪುಸ್ತಕಗಳು, ಹಸ್ತಪ್ರತಿಗಳು ಹಾಗೂ ವಿವಿಧ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನವನ್ನು ಆಯೋಜಿಸುವುದರ ಜೊತೆಗೆ, ಜನರಿಗೆ ಕೈಗೆಟುಕುವ ದರದಲ್ಲಿ ಪುಸ್ತಕಗಳು ದೊರೆಯುವಂತೆ ಮಾರಾಟ ಮೇಳಗಳನ್ನೂ ಆಯೋಜಿಸಲಾಗುತ್ತದೆ.
2) ವಿವಿಧ ಸ್ಪರ್ಧೆಗಳು:
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಲೇಖನ, ಭಾಷಣ ಸ್ಪರ್ಧೆ, ಕಾವ್ಯವಾಚನ, ಪುಸ್ತಕ ಓದು, ಪುಸ್ತಕ ವಿಮರ್ಶೆ ಮತ್ತು ರಸಪ್ರಶ್ನೆಗಳನ್ನು ನಡೆಸುವ ಮೂಲಕ ವಿಜೇತರಿಗೆ ಬಹುಮಾನ ನೀಡಿ ಅವರನ್ನು ಪ್ರೋತ್ಸಾಹಿಸಲಾಗುತ್ತದೆ.
3) ಪುಸ್ತಕ ಜೋಳಿಗೆ ಅಭಿಯಾನ:
ಸಾರ್ವಜನಿಕರಿಂದ ತಮಗೆ ಬೇಡವಾದ ಅಥವಾ ಓದಿ ಮುಗಿಸಿದ ಪುಸ್ತಕಗಳನ್ನು ಬಳುವಳಿಯಾಗಿ ಪಡೆದು, ವಿವಿಧ ಗ್ರಂಥಾಲಯಗಳಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡುವ ಮೂಲಕ ಸಾರ್ವಜನಿಕರು ಓದಿನತ್ತ ಆಕರ್ಷಿತರಾಗುವಂತೆ ಪ್ರೇರೇಪಿಸಲಾಗುತ್ತದೆ.
4) ಲೇಖಕರೊಂದಿಗೆ ಸಂವಾದ:
ಪುಸ್ತಕ ಸಪ್ತಾಹದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಮುಖ್ಯ ವೇದಿಕೆಗೆ ಸಾಹಿತಿಗಳು, ಲೇಖಕರು ಮತ್ತು ಕವಿಗಳನ್ನು ಆಹ್ವಾನಿಸಿ, ಅವರ ಬರವಣಿಗೆಯ ಪಯಣದ ಅನುಭವಗಳನ್ನು ಹಂಚಿಕೊಳ್ಳುವ ಹಾಗೂ ನೇರ ಸಂವಾದ ನಡೆಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
5) ಡಿಜಿಟಲ್ ಜಾಗೃತಿ:
ಇತ್ತೀಚೆಗೆ ಡಿಜಿಟಲ್ ಮಾಧ್ಯಮಗಳ ಬಳಕೆ ಹೆಚ್ಚಾಗಿರುವುದರಿಂದ, ಪುಸ್ತಕಗಳ ಪ್ರಾಮುಖ್ಯತೆಯನ್ನು ಸಾರುವ ಕಿರು ವಿಡಿಯೋಗಳು ಅಥವಾ ರೀಲ್ಸ್ಗಳನ್ನು ತಯಾರಿಸುವ ಮೂಲಕ ಡಿಜಿಟಲ್ ವೇದಿಕೆಗಳಲ್ಲಿ ಪುಸ್ತಕಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಸ್ತುತ ಇ-ಪುಸ್ತಕಗಳು ಮತ್ತು ಆಡಿಯೋ ಪುಸ್ತಕಗಳು ಲಭ್ಯವಿದ್ದರೂ, ಪುಸ್ತಕವನ್ನು ಕೈಯಲ್ಲಿ ಹಿಡಿದು ಅದರ ಸುಗಂಧವನ್ನು ಆಸ್ವಾದಿಸುತ್ತಾ ಪುಟಗಳನ್ನು ತಿರುವಿ ಓದುವ ಸುಖವೇ ಒಂದು ರೀತಿಯ ರೋಮಾಂಚನವನ್ನು ನೀಡುತ್ತದೆ. ಪುಸ್ತಕ ಓದು ವೈಚಾರಿಕ ಜಾಗೃತಿಯನ್ನುಂಟು ಮಾಡುವುದರ ಜೊತೆಗೆ ಮನುಷ್ಯನಲ್ಲಿ ಆಲೋಚನಾ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ.
ರಾಷ್ಟ್ರೀಯ ಪುಸ್ತಕ ಸಪ್ತಾಹವು ಕೇವಲ ನವೆಂಬರ್ ತಿಂಗಳ ಒಂದು ವಾರದ ಆಚರಣೆಗೆ ಮಾತ್ರ ಸೀಮಿತವಾಗಬಾರದು. ದಿನಕ್ಕೊಂದು ಪುಟ ಓದು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು. ಮನೆಮನೆಗಳಲ್ಲೂ ಒಂದು ಪುಟ್ಟ ಗ್ರಂಥಾಲಯವನ್ನು ಹೊಂದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಸಭೆ-ಸಮಾರಂಭಗಳು ಹಾಗೂ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಆಟಿಕೆಗಳ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿಯನ್ನು ಬೆಳೆಸಬೇಕು. ಪ್ರತಿಯೊಬ್ಬ ನಾಗರಿಕನೂ ಓದುಗನಾದಾಗ ಮಾತ್ರ ಭಾರತ ವೈಚಾರಿಕವಾಗಿ ಸಮೃದ್ಧವಾದ ಪ್ರಗತಿಪರ ದೇಶವಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದಿದ್ದಲ್ಲಿ ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕುಂಠಿತಗೊಂಡು ಸಾಮಾಜಿಕ ಕುಸಿತ ಉಂಟಾಗುವ ಸಂಭವವಿದೆ. ಏಕೆಂದರೆ, ಓದು ಮನುಷ್ಯನನ್ನು ಪೂರ್ಣನನ್ನಾಗಿಸುತ್ತದೆ.
ಪುಸ್ತಕ ಸಂಸ್ಕೃತಿ ಮತ್ತು ಜ್ಞಾನ ಪ್ರಸಾರದಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಮಹತ್ವದ ಪಾತ್ರ
ಒಂದು ಸುಸಂಸ್ಕೃತ, ಪ್ರಗತಿಪರ ಸಮಾಜದ ನಿರ್ಮಾಣದಲ್ಲಿ ಪುಸ್ತಕಗಳು ಮತ್ತು ಓದುವ ಹವ್ಯಾಸ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಂತಹ ಬೃಹತ್ ಮತ್ತು ವೈವಿಧ್ಯಮಯ ದೇಶದಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿ, ನಾಗರಿಕರಲ್ಲಿ ಓದಿನ ಆಸಕ್ತಿಯನ್ನು ಜಾಗೃತಗೊಳಿಸಲು ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಸಾಹಿತ್ಯವನ್ನು ಮನೆಮನೆಗೆ ತಲುಪಿಸಲು ಭಾರತ ಸರ್ಕಾರ ಸ್ಥಾಪಿಸಿರುವ ನ್ಯಾಷನಲ್ ಬುಕ್ ಟ್ರಸ್ಟ್ (National Book Trust) ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ.
1957ರ ಆಗಸ್ಟ್ 1ರಂದು ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ ಅವರ ದೂರದರ್ಶಿತ್ವದ ಫಲವಾಗಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಭಾರತೀಯರಲ್ಲಿ ವೈಚಾರಿಕತೆ, ಸಾಹಿತ್ಯಾಸಕ್ತಿ ಮತ್ತು ಜ್ಞಾನಾರ್ಜನೆಯ ಶಿಸ್ತನ್ನು ಬೆಳೆಸುವ ಗುರಿಯನ್ನು ಹೊಂದಿರುವ ನ್ಯಾಷನಲ್ ಬುಕ್ ಟ್ರಸ್ಟ್ನ ಕೇಂದ್ರ ಕಚೇರಿಯು ನವದೆಹಲಿಯಲ್ಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.
ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ ಸೇರಿದಂತೆ ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ ಬಹುತೇಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಇದು ಕೇವಲ ಕಥೆ-ಕಾದಂಬರಿಗಳನ್ನಷ್ಟೇ ಅಲ್ಲದೆ, ವಿಜ್ಞಾನ, ಇತಿಹಾಸ, ಜೀವನಚರಿತ್ರೆ ಮತ್ತು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ವ್ಯಾಪಕವಾಗಿ ಪ್ರಕಟಿಸುತ್ತಿದೆ.
ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸುವ ಪುಸ್ತಕಗಳು ಖಾಸಗಿ ಪ್ರಕಾಶಕರು ಪ್ರಕಟಿಸುವ ಪುಸ್ತಕಗಳಿಗಿಂತ ಕಡಿಮೆ ಬೆಲೆಯಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವುದು ಓದುಗರ ಕುರಿತಾದ ಸಂಸ್ಥೆಯ ಕಾಳಜಿಗೆ ಸಾಕ್ಷಿಯಾಗಿದೆ. ಏಷ್ಯಾ ಖಂಡದ ಅತಿದೊಡ್ಡ ಪುಸ್ತಕ ಮೇಳವಾದ ನವದೆಹಲಿ ವಿಶ್ವ ಪುಸ್ತಕ ಮೇಳವನ್ನು ಪ್ರತಿವರ್ಷ ಆಯೋಜಿಸುವ ನ್ಯಾಷನಲ್ ಬುಕ್ ಟ್ರಸ್ಟ್, ಕೋಟ್ಯಂತರ ಪುಸ್ತಕ ಪ್ರೇಮಿಗಳು, ಬರಹಗಾರರು ಮತ್ತು ಪ್ರಕಾಶಕರನ್ನು ಒಂದೇ ಸೂರಿನಡಿ ತರುವ ವಿಶಿಷ್ಟ ಕಾರ್ಯವನ್ನು ಮಾಡುತ್ತಿದೆ.
ದೇಶದೆಲ್ಲೆಡೆ ಅಕ್ಷರ ಕ್ರಾಂತಿ ಹಾಗೂ ಜ್ಞಾನ ಕ್ರಾಂತಿಗಾಗಿ ಶ್ರಮಿಸುತ್ತಿರುವ ನ್ಯಾಷನಲ್ ಬುಕ್ ಟ್ರಸ್ಟ್, ಗ್ರಾಮೀಣ ಭಾಗದ ಜನರಿಗಾಗಿ ವಿಶೇಷ ವಾಹನಗಳ ಮೂಲಕ ಹಳ್ಳಿಹಳ್ಳಿಗಳನ್ನು ತಲುಪಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುತ್ತಿದೆ. ಜೊತೆಗೆ, ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ಆಯೋಜಿಸಿ, ದೇಶದಾದ್ಯಂತ ಪುಸ್ತಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿವಿಧ ಶಾಲೆಗಳಲ್ಲಿ ಪುಸ್ತಕ ಪ್ರದರ್ಶನಗಳು, ಲೇಖಕರೊಂದಿಗೆ ಸಂವಾದಗಳು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಹಿತ್ಯಕ ಸ್ಪರ್ಧೆಗಳನ್ನು ನಡೆಸುವ ಮೂಲಕ ಓದುವ ಹವ್ಯಾಸವನ್ನು ಜನರಲ್ಲಿ ಬೆಳೆಸಲು ಹಲವಾರು ರಚನಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ.
ಕಳೆದ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ನ್ಯಾಷನಲ್ ಬುಕ್ ಟ್ರಸ್ಟ್ ಭಾರತದ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡುತ್ತ ಬಂದಿದೆ. ಡಿಜಿಟಲ್ ಯುಗದ ಇಂದಿನ ಬೃಹತ್ ಸವಾಲುಗಳ ನಡುವೆಯೂ ಭೌತಿಕ ಪುಸ್ತಕಗಳ ಮಹತ್ವವನ್ನು ಎತ್ತಿಹಿಡಿಯುವಲ್ಲಿ ಮತ್ತು ಪ್ರತಿಯೊಬ್ಬ ಭಾರತೀಯನ ಕೈಗೆ ಪುಸ್ತಕವನ್ನು ತಲುಪಿಸುವಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ನ ಶ್ರಮ ಅಪಾರವಾಗಿದೆ. ‘ಎಲ್ಲರಿಗೂ ಪುಸ್ತಕಗಳು, ಎಲ್ಲೆಡೆ ಜ್ಞಾನ’ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಭಾರತದ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸದ್ಯ ಪ್ರೊ. ಮಿಲಿಂದ ಸುಧಾಕರ ಮರಾಠೆ ಅವರು ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಪ್ರೊ. ಯು.ಆರ್. ಅನಂತಮೂರ್ತಿ ಹಾಗೂ ಸುಮತೀಂದ್ರ ನಾಡಿಗ ಅವರು ನ್ಯಾಷನಲ್ ಬುಕ್ ಟ್ರಸ್ಟ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯು 2026ನೇ ಸಾಲಿನಲ್ಲಿ ಪುಸ್ತಕ ಸಂಸ್ಕೃತಿ ಮತ್ತು ಸಾಕ್ಷರತೆಯನ್ನು ಉತ್ತೇಜಿಸಲು ಅಳವಡಿಸಿಕೊಂಡಿರುವ ಪ್ರಮುಖ ವಿಷಯಗಳು (ಥೀಮ್ಗಳು) ಹೀಗಿವೆ:
1) ಸೃಜನ್: ಸಶಕ್ತ ಭಾರತಕ್ಕಾಗಿ ಸಾಕ್ಷರತೆ ((Srijan: Literacy for Empowered India)
ಭಾರತೀಯ ನಾಗರಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಜ್ಞಾನದ ಸಶಕ್ತೀಕರಣವನ್ನು ಸಾಧಿಸುವುದು ಮತ್ತು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಾಕ್ಷರತೆಯ ಶಕ್ತಿಯನ್ನು ತಲುಪಿಸುವುದು ಇದರ ಮೂಲ ಉದ್ದೇಶವಾಗಿದೆ.
2) ನನ್ನ ಪದಗಳು, ನನ್ನ ಕಥೆ (My Words, My Story):
ಇದು ಮಕ್ಕಳು ಮತ್ತು ಯುವ ಬರಹಗಾರರಲ್ಲಿ ತಮ್ಮ ಸ್ವಂತ ಆಲೋಚನೆಗಳನ್ನು ವ್ಯಕ್ತಪಡಿಸಲು ಹಾಗೂ ಅವುಗಳನ್ನು ಕಥೆಯ ರೂಪದಲ್ಲಿ ಅಭಿವ್ಯಕ್ತಿಸಲು ಪ್ರೇರೇಪಿಸುತ್ತದೆ.
3) ಬಹುಭಾಷಾ ಮತ್ತು ಪ್ರಾದೇಶಿಕ ಸಾಹಿತ್ಯ (Multilingual Bharat):
ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ 22 ಅಧಿಕೃತ ಭಾಷೆಗಳು ಹಾಗೂ ಬುಡಕಟ್ಟು ಭಾಷೆಗಳ ಸಾಹಿತ್ಯಕ್ಕೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ, ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
4) ತಂತ್ರಜ್ಞಾನ ಮತ್ತು ಭವಿಷ್ಯದ ಶಿಕ್ಷಣ (Future Education and AI):
ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಇ-ಪುಸ್ತಕಗಳು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಓದುಗರನ್ನು ಆಕರ್ಷಿಸುವುದು ಹಾಗೂ ಸಂವಾದಾತ್ಮಕ ಓದಿಗೆ ಒತ್ತು ನೀಡುವುದು ಈ ಬಾರಿ ನಡೆಯಲಿರುವ ಪುಸ್ತಕ ಸಪ್ತಾಹದ ಪ್ರಮುಖ ವಿಷಯಗಳಾಗಿವೆ.
ಸದ್ಯ ಭಾರತದಲ್ಲಿ ಅಂದಾಜು 17 ಸಾವಿರಕ್ಕೂ ಹೆಚ್ಚು ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, 25ಕ್ಕೂ ಹೆಚ್ಚು ಭಾಷೆಗಳಲ್ಲಿ 75 ಸಾವಿರಕ್ಕೂ ಅಧಿಕ ಶೀರ್ಷಿಕೆಗಳ ಪುಸ್ತಕಗಳು ಮುದ್ರಣಗೊಂಡು ಓದಲು ಸಿದ್ಧವಾಗುತ್ತಿವೆ. ಒಂದು ಅಂದಾಜಿನ ಪ್ರಕಾರ, ಪ್ರತಿ ಆರ್ಥಿಕ ವರ್ಷದಲ್ಲಿ ಸುಮಾರು 15 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಪುಸ್ತಕ ಕ್ಷೇತ್ರದಲ್ಲಿ ನಡೆಯುತ್ತಿರುವುದು ಅಚ್ಚರಿಯ ವಿಷಯವಾಗಿದೆ.
ಟಿವಿ, ಗಣಕಯಂತ್ರ, ಅಂತರ್ಜಾಲ ಹಾಗೂ ಮಾಹಿತಿ ತಂತ್ರಜ್ಞಾನ ಇಂದು ಪುಸ್ತಕಗಳ ಮೇಲೆ ಸವಾರಿ ಮಾಡುತ್ತಿವೆ. ಕಂಪ್ಯೂಟರಿನ ಮೌಸ್ನ ಗುಂಡಿಯನ್ನು ಒತ್ತಿದರೆ ಇಂದು ವಿಶ್ವದ ಎಲ್ಲೆಡೆಯ ಮಾಹಿತಿಯೂ ನಮ್ಮೆದುರು ಲಭ್ಯವಾಗುವ ಸೌಲಭ್ಯವಿದೆ. ಹೀಗಿರುವಾಗ ಪುಸ್ತಕಗಳೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಬಹುದು. ನಮ್ಮೆಲ್ಲರಲ್ಲೂ ಮಾಹಿತಿ ಪಡೆಯುವ ಆಸಕ್ತಿ ಇದ್ದರೂ, ಅವುಗಳ ಸ್ವರೂಪ ಮತ್ತು ವ್ಯಾಪ್ತಿ ಭಿನ್ನವಾಗಿವೆ. ಆದರೆ, ಪುಸ್ತಕಗಳು ಹಾಗಲ್ಲ. ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ, ಎಲ್ಲೆಂದರಲ್ಲಿ ಓದಿ ಜ್ಞಾನ ಪಡೆಯುವ ಅವಕಾಶವನ್ನು ನೀಡುವ ಜ್ಞಾನದೀಪಗಳಾಗಿವೆ. ಟಿವಿ ಮತ್ತು ಅಂತರ್ಜಾಲಗಳು ಮನುಷ್ಯನಿಗೆ ಸಂತೋಷವನ್ನು ಹೆಚ್ಚಿಸಬಲ್ಲವು. ಆದರೆ, ಪುಸ್ತಕಗಳು ಓದುಗನೊಂದಿಗೆ ಸ್ಪಂದಿಸಿ ಸಂತೃಪ್ತಿಯ ಭಾವನೆಯನ್ನು ನೀಡುತ್ತವೆ.
ಪೋಷಕರು ಮನೆಯಲ್ಲಿ ಮಕ್ಕಳ ಎದುರು ಸದಾಕಾಲ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುವುದನ್ನು ಬಿಟ್ಟು, ತಾವೂ ಕೂಡ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಮಕ್ಕಳು ಅದನ್ನು ಸ್ವಯಂಚಾಲಿತವಾಗಿ ಪಾಲಿಸುತ್ತಾರೆ. ‘ಹೆತ್ತವರನ್ನು ನೋಡಿ ಮಕ್ಕಳು ಕಲಿಯುತ್ತಾರೆ’ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಅಂತೆಯೇ, ಇನ್ನು ಮುಂದಾದರೂ ನಾವೆಲ್ಲರೂ ಪುಸ್ತಕಗಳನ್ನು ಪ್ರೀತಿಸೋಣ. ಜ್ಞಾನದ ಬೆಳಕನ್ನು ಹರಡೋಣ. ಏಕೆಂದರೆ, ಪುಸ್ತಕಗಳಲ್ಲಿನ ಜ್ಞಾನ ಮಸ್ತಕದೊಳಗೆ ಬಂದಾಗ ಮಾತ್ರ ಮನುಷ್ಯ ಸುಸಂಸ್ಕೃತ ನಾಗರಿಕನಾಗುತ್ತಾನೆ.
— ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು





ನಿಮ್ಮ ಕಾಮೆಂಟ್ ಬರೆಯಿರಿ