ಟಿ20 ವಿಶ್ವಕಪ್ : ಫಿನ್ ಅಲೆನ್ ವೇಗದ ಶತಕಕ್ಕೆ ದಾಖಲೆ ಧೂಳೀಪಟ ; ದಕ್ಷಿಣ ಆಫ್ರಿಕಾ ಮಣಿಸಿ ನ್ಯೂಜಿಲೆಂಡ್ ಫೈನಲ್‌ಗೆ

ಕೋಲ್ಕತ್ತಾ : ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ನಡೆದ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 2024ರ ರನ್ನರ್-ಅಪ್ ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ.
ಈ ಪಂದ್ಯಕ್ಕೂ ಮುನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಆಡಿದ್ದ 5 ಪಂದ್ಯಗಳಲ್ಲೂ ಸೋತಿತ್ತು (5-0 ದಾಖಲೆ). ಆದರೆ, ಬುಧವಾರದ ಸೆಮಿ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ವಿಶ್ವಕಪ್ ವೇದಿಕೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಚೊಚ್ಚಲ ಜಯ ದಾಖಲಿಸಿ ಇತಿಹಾಸ ನಿರ್ಮಿಸಿತು.
ಹರಿಣಗಳ ಬ್ಯಾಟಿಂಗ್ ಕುಸಿತ: ಜಾನ್ಸೆನ್-ಸ್ಟಬ್ಸ್ ಹೋರಾಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ತತ್ತರಿಸಿತು. ಕೇವಲ 2 ಓವರ್‌ಗಳಲ್ಲಿ 12 ರನ್ ಗಳಿಸುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ನ್ಯೂಜಿಲೆಂಡ್‌ನ ಕೋಲ್ ಮೆಕಾಂಚಿ ಒಂದೇ ಓವರ್‌ನ ಸತತ ಎಸೆತಗಳಲ್ಲಿ ಕ್ವಿಂಟನ್ ಡಿ ಕಾಕ್ (10) ಮತ್ತು ರಯಾನ್ ರಿಕೆಲ್ಟನ್ (0) ಅವರನ್ನು ಔಟ್ ಮಾಡಿ ಶಾಕ್ ನೀಡಿದರು.

ನಾಯಕ ಏಡನ್ ಮಾರ್ಕ್ರಾಮ್ ಮತ್ತು ಡೆವಾಲ್ಡ್ ಬ್ರೆವಿಸ್ 43 ರನ್‌ಗಳ ಜೊತೆಯಾಟದ ಮೂಲಕ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ರಚಿನ್ ರವೀಂದ್ರ ಅವರು ಎಂಟನೇ ಓವರ್‌ನಲ್ಲಿ ಮಾರ್ಕ್ರಾಮ್ ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟವನ್ನು ಮುರಿದರು. ನಂತರ ಬಂದ ಡೇವಿಡ್ ಮಿಲ್ಲರ್ ಕೂಡ ರವೀಂದ್ರಗೆ ವಿಕೆಟ್ ಒಪ್ಪಿಸಿದರು. ಜಿಮ್ಮಿ ನೀಶಮ್ ಅವರು ಬ್ರೆವಿಸ್ (34) ಅವರನ್ನು ಔಟ್ ಮಾಡಿದಾಗ, 11ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ 77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು.
ಈ ಹಂತದಲ್ಲಿ ಜೊತೆಯಾದ ಟ್ರಿಸ್ಟಾನ್ ಸ್ಟಬ್ಸ್ (29) ಮತ್ತು ಮಾರ್ಕೊ ಜಾನ್ಸೆನ್ 6ನೇ ವಿಕೆಟ್‌ಗೆ 73 ರನ್‌ಗಳ ಅಮೋಘ ಜೊತೆಯಾಟವಾಡಿದರು. ಇದು ದಕ್ಷಿಣ ಆಫ್ರಿಕಾ ಪರ 6ನೇ ವಿಕೆಟ್‌ಗೆ ದಾಖಲಾದ ಹೊಸ ವಿಶ್ವಕಪ್ ದಾಖಲೆಯಾಗಿದೆ. 18ನೇ ಓವರ್‌ನಲ್ಲಿ ನೀಶಮ್ ಬೌಲಿಂಗ್‌ನಲ್ಲಿ 22 ರನ್ ಚಚ್ಚಿದ ಈ ಜೋಡಿ ಮೊತ್ತವನ್ನು 150ರ ಗಡಿ ದಾಟಿಸಿತು. ಸ್ಟಬ್ಸ್ ಔಟಾದ ನಂತರವೂ ಅಬ್ಬರಿಸಿದ ಜಾನ್ಸೆನ್, ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 30 ಎಸೆತಗಳಲ್ಲಿ ಅಜೇಯ 55 ರನ್ (2 ಬೌಂಡರಿ, 5 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 169/8 ಕ್ಕೆ ತಲುಪಿಸಿದರು.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

ಫಿನ್ ಅಲೆನ್ ದಾಖಲೆಗಳ ಸುನಾಮಿ
170 ರನ್‌ಗಳ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭಿಕರಾದ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್, ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ವಿಮಾನ ಏರಲು ತಮಗೆ ಅವಸರವಿದೆ ಎನ್ನುವಂತೆ ಬ್ಯಾಟ್ ಬೀಸಿದರು. ಪವರ್‌ ಪ್ಲೇನಲ್ಲೇ ಈ ಜೋಡಿ ಬರೋಬ್ಬರಿ 84 ರನ್ ಕಲೆಹಾಕಿತು.
ವಿಶ್ವ ದಾಖಲೆಯ ಶತಕ:
ಸೀಫರ್ಟ್ 28 ಎಸೆತಗಳಲ್ಲಿ 50 ರನ್ ಪೂರೈಸಿದರೆ, ಅಲೆನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ವೇಗದ ಅರ್ಧ ಶತಕ ಬಾರಿಸಿದರು.
ನಂತರ ಅಬ್ಬರದ ಆಟ ಮುಂದುವರಿಸಿದ ಫಿನ್ ಅಲೆನ್ ಅವರು ಕೇವಲ 33 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ವೇಗದ ಶತಕದ ದಾಖಲೆ ಬರೆದರು. ಈ ಮೂಲಕ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ (47 ಎಸೆತ) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕಿದರು.
300+ ಸ್ಟ್ರೈಕ್ ರೇಟ್: ಅಲೆನ್ ಅವರ ಬಿರುಗಾಳಿ ಇನಿಂಗ್ಸ್‌ನಿಂದಾಗಿ ನ್ಯೂಜಿಲೆಂಡ್ ತಂಡ ಕೇವಲ 12.5 ಓವರ್‌ಗಳಲ್ಲಿ ಗುರಿ ತಲುಪಿತು. ಅಲೆನ್ ಅವರ ಅಂತಿಮ ಮೊತ್ತ 100* (33 ಎಸೆತ) ಗಳಿಸಿದರು. ಅವರ ಸ್ಟ್ರೈಕ್‌ ರೇಟ್‌ 300+ ಆಗಿದೆ. ಸೀಫರ್ಟ್ (58) ಅವರ ವಿಕೆಟ್ ಅನ್ನು ಕಗಿಸೊ ರಬಾಡ ಪಡೆದರೂ, ಅದು ಕಿವೀಸ್ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

ಸಂಕ್ಷಿಪ್ತ ಸ್ಕೋರ್ ವಿವರ:
ದಕ್ಷಿಣ ಆಫ್ರಿಕಾ: 169/8 (20 ಓವರ್)
ಮಾರ್ಕೊ ಜಾನ್ಸೆನ್ 55* (30), ಡೆವಾಲ್ಡ್ ಬ್ರೆವಿಸ್ 34.
ಕೋಲ್ ಮೆಕಾಂಚಿ 2/9, ರಚಿನ್ ರವೀಂದ್ರ 2/29, ಮ್ಯಾಟ್ ಹೆನ್ರಿ 2/32.
ನ್ಯೂಜಿಲೆಂಡ್: 173/1 (12.5 ಓವರ್)
ಫಿನ್ ಅಲೆನ್ 100* (33), ಟಿಮ್ ಸೀಫರ್ಟ್ 58 (33).
ಕಗಿಸೊ ರಬಾಡ 1/28.
ಮುಂದಿನ ಪಂದ್ಯಗಳು:
ಈ ಭರ್ಜರಿ ಗೆಲುವಿನೊಂದಿಗೆ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದ್ದು, ಗುರುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ರವಿವಾರದ ಫೈನಲ್‌ನಲ್ಲಿ ಎದುರಿಸಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement