ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ಕಾರವಾರ : ದೇಶದ ಪ್ರಸಿದ್ಧ ಉದ್ಯಮಿ ಆನಂದ ಮಹೀಂದ್ರಾ ಅವರು ಮತ್ತೊಮ್ಮೆ ಭಾರತದ ಅಷ್ಟಾಗಿ ಪರಿಚಯವಿಲ್ಲದ, ಅಪರೂಪದ ಪ್ರವಾಸಿ ತಾಣಗಳತ್ತ ಜನರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕರ್ನಾಟಕದ ಉತ್ತರ ಕನ್ನ ಜಿಲ್ಲೆಯ ಕರಾವಳಿ ತೀರದ ಸುಂದರ ತಾಣ ‘ಹೊನ್ನಾವರ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದನ್ನು ಪ್ರಕೃತಿಯ ಒಂದು ‘ಮಾಂತ್ರಿಕ ಭೂದೃಶ್ಯ’ (Magical Landscape) ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಸದಾ ಸಕ್ರಿಯರಾಗಿರುವ ಮತ್ತು ವಿಶಿಷ್ಟ ಪ್ರವಾಸಿ ತಾಣಗಳನ್ನು ಅನ್ವೇಷಿಸಿ ಹಂಚಿಕೊಳ್ಳುವ ಹವ್ಯಾಸ ಹೊಂದಿರುವ ಆನಂದ ಮಹೀಂದ್ರಾ ಅವರು, ಹೊನ್ನಾವರದ ರಮಣೀಯ ದೃಶ್ಯಗಳನ್ನು ಹಂಚಿಕೊಂಡು ಸುದೀರ್ಘ ಪೋಸ್ಟ್ ಒಂದನ್ನು ಬರೆದಿದ್ದಾರೆ. ಇದು ಪ್ರವಾಸಿಗರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಆನಂದ ಮಹೀಂದ್ರಾ ಪೋಸ್ಟ್‌ನಲ್ಲೇನಿದೆ ?
“ಕಡಿಮೆ ಜನಸಂದಣಿ ಇರುವ ಮತ್ತು ಅಷ್ಟಾಗಿ ಅನ್ವೇಷಣೆಗೆ ಒಳಗಾಗದ ಪ್ರವಾಸಿ ತಾಣಗಳ ಹುಡುಕಾಟವನ್ನು ನಾನು ಮುಂದುವರಿಸಿದ್ದೇನೆ. ನಾವು ಯಾವಾಗಲೂ ಕೇರಳದ ಹಿನ್ನೀರನ್ನು (Backwaters) ಕೊಂಡಾಡುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಅಷ್ಟೇ ಅದ್ಭುತವಾದ, ಸಮಾನ ಗಮನ ಸೆಳೆಯಬೇಕಾದ ರಹಸ್ಯ ರತ್ನವೊಂದಿದೆ. ವಿಶ್ವಪ್ರಸಿದ್ಧ ಜೋಗ್ ಫಾಲ್ಸ್‌ನಲ್ಲಿ ಅಬ್ಬರಿಸಿ ಧುಮುಕುವ ಅದೇ ಶರಾವತಿ ನದಿ, ಅಂತಿಮವಾಗಿ ಹೊನ್ನಾವರದಲ್ಲಿ ಅತ್ಯಂತ ಶಾಂತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ” ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.
“ಇಲ್ಲಿನ ಚಿತ್ರಗಳನ್ನು ಎಡಿಟ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ನನಗೆ ಖಚಿತವಿಲ್ಲ, ಆದರೆ ಹೊನ್ನಾವರ ಒಂದು ಮಾಂತ್ರಿಕ ಭೂದೃಶ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಕಾಂಡ್ಲಾ (Mangrove) ಕಾಡುಗಳು, ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತಹ ಹಿನ್ನೀರು ಕಣ್ಣಿಗೆ ಹಬ್ಬ ನೀಡುತ್ತವೆ. ಕಾಂಡ್ಲಾ (Mangrove) ಕಾಡುಗಳು ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಕರಾವಳಿ ರಕ್ಷಕಗಳಾಗಿರುವುದರಿಂದ, ಹೊನ್ನಾವರದ ಸೌಂದರ್ಯವು ಪರಿಸರ ವಿಜ್ಞಾನದ ದೃಷ್ಟಿಯಿಂದಲೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ” ಎಂದು ಹೊನ್ನಾವರದ ಪರಿಸರ ಮಹತ್ವವನ್ನು ಅವರು ಎತ್ತಿ ತೋರಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

ನೆಟ್ಟಿಗರ ಮನಗೆದ್ದ ಹೊನ್ನಾವರದ ಸೌಂದರ್ಯ:
ಆನಂದ ಮಹೀಂದ್ರಾ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹೊನ್ನಾವರಕ್ಕೆ ಭೇಟಿ ನೀಡಿದ್ದ ಹಲವು ಪ್ರವಾಸಿಗರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
“ಇದು ನೂರಕ್ಕೆ ನೂರು ನಿಜ. ನಾನು ಕೆಲವು ವರ್ಷಗಳ ಹಿಂದೆ ಶರಾವತಿ ಮತ್ತು ಹೊನ್ನಾವರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸೌಂದರ್ಯಕ್ಕೆ ನಾನು ಸಂಪೂರ್ಣವಾಗಿ ಮಾರುಹೋಗಿದ್ದೆ. ಅಲ್ಲಿ ನಾನು ತೆಗೆದ ಈ ಚಿತ್ರ ನನ್ನ ನೆನಪಿನಲ್ಲಿ ಸದಾ ಹಸಿರಾಗಿದೆ” ಎಂದು ಬಳಕೆದಾರರೊಬ್ಬರು ತಾವು ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, “ಸಾಮಾನ್ಯವಾಗಿ ಕೇರಳಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ, ಆದರೆ ಕರ್ನಾಟಕವು ಅತ್ಯಂತ ಸುಂದರವಾದ ರಾಜ್ಯವಾಗಿದ್ದು, ಇಲ್ಲಿನ ಜನರು ಅದ್ಭುತವಾಗಿದ್ದಾರೆ. ಅವರು ಧರ್ಮ ಮತ್ತು ಭಾರತಕ್ಕಾಗಿ ಕಳೆದ 1000 ವರ್ಷಗಳಿಂದ ಅಪಾರ ಕೊಡುಗೆ ನೀಡಿದ್ದಾರೆ. ಹೊನ್ನಾವರ ನಿಜಕ್ಕೂ ಅತ್ಯಂತ ಶಾಂತ ಮತ್ತು ಸುಂದರ ತಾಣ” ಎಂದು ಹೇಳಿದ್ದಾರೆ.
“ಭಾರತದ ಕರಾವಳಿಯು ಇಂತಹ ಹತ್ತಾರು ರಹಸ್ಯ ಅದ್ಭುತಗಳಿಂದ ತುಂಬಿದೆ. ಸೌಂದರ್ಯಕ್ಕೆ ಜನಸಂದಣಿಯ ಅಗತ್ಯವಿಲ್ಲ ಎಂಬುದನ್ನು ಹೊನ್ನಾವರ ನೆನಪಿಸುತ್ತದೆ” ಎಂದು ಇನ್ನೊಬ್ಬರು ಹೊನ್ನಾವರದ ಕರಾವಳಿಯ ಹಿರಿಮೆಯನ್ನು ಕೊಂಡಾಡಿದ್ದಾರೆ.
ಒಟ್ಟಾರೆಯಾಗಿ, ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರ ಒಂದೇ ಒಂದು ಪೋಸ್ಟ್, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಪ್ರವಾಸೋದ್ಯಮದ ಹಾಟ್‌ಸ್ಪಾಟ್ ಆಗಿ ಬಿಂಬಿಸುವಂತೆ ಮಾಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement