ಧಾರವಾಡ: ಖ್ಯಾತ ಹಿಂದೂಸ್ತಾನೀ ಗಾಯಕಿ ಡಾ. ಸುಲಭಾ ದತ್ತ ನೀರಲಗಿ ಇನ್ನಿಲ್ಲ

ಧಾರವಾಡ : ದಿ.ಗಂಗೂಬಾಯಿ ಹಾನಗಲ್ ಅವರ ಹಿರಿಯ ಶಿಷ್ಯೆ ಹಾಗೂ ಧಾರವಾಡದ ಪ್ರಸಿದ್ಧ ಹಿಂದೂಸ್ತಾನೀ ಸಂಗೀತಗಾರರಾದ ಡಾ. ಸುಲಭಾ ದತ್ತ ನೀರಲಗಿ (೬೮) ಅವರು ಶನಿವಾರ (ನವೆಂಬರ್‌ ೧೮) ನಿಧನರಾಗಿದ್ದಾರೆ.
ಧಾರವಾಡದ ರಜತಗಿರಿ ನಿವಾಸಿಯಾಗಿದ್ದ ಡಾ. ಸುಲಭಾ ದತ್ತ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು, ಪತಿ, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಸಂಗೀತಾಭಿಮಾನಿಗಳನ್ನು ಅಗಲಿದ್ದಾರೆ.
ಕಿರಾಣಾ ಘರಾಣಾದ ಗಾಯಕಿ ಸುಲಭಾ ದತ್ತ ನೀರಲಗಿ ತಮ್ಮ ಬದುಕನ್ನೇ ಸಂಗಿತಕ್ಕಾಗಿ ಸಮರ್ಪಿಸಿಕೊಂಡವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದ ಇವರು, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಹಿರಿಯ ಶಿಷ್ಯೆಯಾಗಿದ್ದರು. ೨೫ಕ್ಕೂ ಹೆಚ್ಚು ವರ್ಷಗಳ ಕಾಲ ಡಾ. ಗಂಗೂಬಾಯಿ ಹಾನಗಲ್ ಅವರ ಬಳಿ ಸಂಗೀತ ಶಿಕ್ಷಣ ಪಡೆದಿದ್ದಾರೆ.

ಮೂಲತಃ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದವರಾದ ಸುಲಭಾ ಅವರ ತಂದೆ ವಿಶ್ವನಾಥ ರಾವ್‌ ಡಂಬಳ, ತಾಯಿ ಉಷಾ. ಅವರ ಮನೆಯಲ್ಲಿ ಸಂಗೀತ ಹಾಗೂ ನೃತ್ಯದ ವಾತಾವರಣವಿತ್ತು. ಕುಟುಂಬ ಧಾರವಾಡಕ್ಕೆ ಸ್ಥಳಾಂತರಗೊಂಡ ನಂತರ ಹೊಸಯಲ್ಲಾಪುರದ ಸರ್ಕಾರಿ ಶಾಲೆ ಸಂಖ್ಯೆ-೧೦ರಲ್ಲಿ ಸುಲಭಾ ಪ್ರಾಥಮಿಕ ಶಿಕ್ಷಣ ಪಡೆದರು. ವಿದ್ಯಾರಣ್ಯ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂಣಗೊಳಿಸಿದರು. ಕರ್ನಾಟಕ ಸಂಗೀತ ವಿದ್ಯಾಲಯದಲ್ಲಿ ಸಂಗೀತ ಪದವಿ ಪಡೆದುಕೊಂಡರು. ಆರಂಭದಲ್ಲಿ ನಾರಾಯಣರಾವ್‌ ಮುಜುಮದಾರ ಅವರ ಬಳಿ ಸಂಗೀತ ಶಿಕ್ಷಣ ಪಡೆದ ಸುಲಭಾ ಅವರು, ಶೇಷಗಿರಿ ದಂಡಾಪುರ ಅವರ ಬಳಿಯೂ ಕೆಲ ವರ್ಷ ಅಭ್ಯಾಸ ಮಾಡಿದರು. ನೃತ್ಯದಲ್ಲಿಯೂ ಆಸಕ್ತಿ ಹೊಂದಿದ್ದ ಅವರು ಅನೇಕ ಬಹುಮಾನ ಪಡೆದಿದ್ದಾರೆ. ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರಬಳಿ ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತ ಅಭ್ಯಾಸ ಮಾಡಿ ಕಿರಾಣಾ ಘರಾಣಾದ ಪರಿಣಿತ ಸಂಗೀತ ಗಾಯಕಿಯಾದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಪದವಿ ಕಲಿಕಾ ಹಂತದಲ್ಲಿ ಆಕಾಶವಾಣಿಯ ಯುವವಾಣಿ ವಿಭಾಗದ ಕಲಾವಿದೆಯಾಗಿ ಮುಂದೆ ಶಾಸ್ತ್ರೀಯ ಸಂಗೀತದ ಅನುಮೋದಿತ ಕಲಾವಿದೆಯಾಗಿ ಐದು ದಶಕಗಳ ಕಾಲ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. “ಹಿಂದೂಸ್ತಾನಿ ರಾಗಪದ್ಧತಿಯಲ್ಲಿ ಸಮಯಪ್ರಜ್ಞೆ’ ಕುರಿತು ಪ್ರೊ. ಶಶಿಕಲಾ ಚೌಡಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಸುಗಮ ಸಂಗೀತದಲ್ಲಿ ಉತ್ತಮ ಶ್ರೇಣಿಯ ಕಲಾವಿದೆಯಾಗಿದ್ದರೂ ಶಾಸ್ತ್ರೀಯ ಸಂಗೀತದಲ್ಲಿಯೇ ಉನ್ನತ ಸಾಧನೆ ಮಾಡಿದರು.
ಕಿತ್ತೂರಿನ ಕೆಎನ್‌ವಿವಿ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದೂಸ್ತಾನಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಪುಣೆಯ ಸವಾಯಿ ಗಂಧರ್ವ ಸಂಗೀತ ಸಮಾರೋಹ, ಕುಂದಗೋಳದಲ್ಲಿ ಸವಾಯಿ ಗಂಧರ್ವರ ಪುಣ್ಯತಿಥಿ ಕಾರ್ಯಕ್ರಮ,
ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಗೀತ ಕಾರ್ಯಕ್ರಮ, ಚೆನ್ನೈ ಅಣ್ಣಾಮಲೈ ವಿಶ್ವವಿದ್ಯಾಯ, ಮೈಸೂರು ದಸರಾ ಉತ್ಸವ
ಕರ್ನಾಟಕ ಸಂಗೀತ ಅಕಾಡೆಮಿ ಕಾರ್ಯಕ್ರಮಗಳು ಹೀಗೆ ಅನೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಿರಂತರ ಅಭ್ಯಾಸ, ಪತಿಯ ಸಹಕಾರದಿಂದಾಗಿ ಸುಲಭಾ ದತ್ತ ಅವರು ಅಗಾಧ ಸಾಧನೆ ಮಾಡಿರುವುದಾಗಿ ಹೇಳುತ್ತಿದ್ದರು. ಕಿರಾಣಾ ಘರಾಣಾದ ಗಾಯಕಿ ಸುಲಭಾ ನೀರಲಗಿ ತಮ್ಮ ಗಾಯನ ನಿಲ್ಲಿಸಿರುವುದು ಕಿರಾಣಾ ಘರಾಣೆಯ ನಕ್ಷತ್ರವೊಂದು ಕಳಚಿದಂತಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು
ಡಾ. ಸುಲಭಾ ದತ್ತ ನಿರಲಗಿ ಅವರು ನಿರ್ಮಿಸಿದ ಕಲಾಶ್ರೀ ಸಂಗೀತ ಸಭಾ

ಸ್ವಂತ ಹಣದಲ್ಲಿ ಸಂಗೀತ ಭವನ ನಿರ್ಮಾಣ: ಮಾದರಿ ಕಾರ್ಯಕ್ಕೆ ಪರಿಷತ್‌ನಲ್ಲಿ ಹೊರಟ್ಟಿ ಮೆಚ್ಚುಗೆ…
ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ತಮಗೆ ಬಂದ ಹಣದಲ್ಲಿ ಸುಮಾರು ೪೦ ಲಕ್ಷ ರೂ. ಖರ್ಚು ಮಾಡಿ ಕಲಾಶ್ರೀ ಸಂಗೀತ ಸಭಾ ಎಂಬ ಭವನ ನಿರ್ಮಿಸಿದ್ದಾರೆ. ಸಂಗೀತ ಚಟುವಟಿಕೆಗಳಿಗಾಗಿ ಉಚಿತವಾಗಿ ನೀಡುವ ಉದ್ದೇಶದಿಂದ ಈ ಭವನ ನಿರ್ಮಿಸಲಾಯಿತು. ಅನೇಕ ಸಂಗೀತ ಕಚೇರಿಗಳು, ಸಂಗೀತಗಾರರ ಸಭೆಗಳು ಇಲ್ಲಿ ನಡೆದಿದ್ದು, ಈ ಸಭಾಂಗಣ ಹಲವು ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಸ್ವಂತ ಖರ್ಚಿನಿಂದ ಮಾದರಿ ಸಂಗೀತ ಸಭಾಂಗಣ ನಿರ್ಮಿಸಿದ್ದನ್ನು ಮೆಚ್ಚಿಕೊಂಡ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಕಲಾಶ್ರೀ ಸಂಗೀತ ಸಭಾ ಕುರಿತು ಪ್ರಸ್ತಾಪಿಸಿದ್ದರು. ಗಾಯಕಿಯೊಬ್ಬರು ತಾವು ಗಳಿಸಿದ ಹಣದಿಂದ ಸಂಗೀತ ಸಭಾಂಗಣ ನಿರ್ಮಿಸಿದ್ದನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಪ್ರಶಸ್ತಿಗಳು
ಅವರ ಪ್ರತಿಭೆಯಿಂದಾಗಿ ಹಲವು ಪ್ರಶಸ್ತಿಗಳು ಸುಲಭಾ ಅವರಿಗೆ ಸಂದಿವೆ. ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾಶ್ರೀ’ ಪ್ರಶಸ್ತಿ, ಶಿವಮೊಗ್ಗದಲ್ಲಿ ಸಹ್ಯಾದ್ರಿ ಸಂಗೀತ ಅಕಾಡೆಮಿ ವತಿಯಿಂದ “ಡಾ. ಗಂಗೂಬಾಯಿ ಹಾನಗಲ್ ಸ್ಮರಣ ಪುರಸ್ಕಾರ’, ದಿ. ಪಂ. ವಸಂತ ಕನಕಾಪುರ ಸ್ಮರಣಾರ್ಥ “ಕನಕಶ್ರೀ’ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement