ರಿವಾಲ್ವರಿನಿಂದ ಆಕಸ್ಮಿಕ ಗುಂಡು ಹಾರಿ ಪತ್ನಿ ಸಾವು ; ಆಘಾತದಿಂದ ಕಾಂಗ್ರೆಸ್ ಸಂಸದನ ಸೋದರಳಿಯ ಆತ್ಮಹತ್ಯೆ

ಅಹಮದಾಬಾದ್: ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಅವರ ಸೋದರಳಿಯ ಯಶರಾಜ ಸಿನ್ಹ ಗೋಹಿಲ್ ಅವರು ಪತ್ನಿಯ ಸಾವಿನ ಆಘಾತದಿಂದ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಇಲ್ಲಿನ ಬೋಡಕ್‌ದೇವ್ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಮಧ್ಯರಾತ್ರಿ ಸುಮಾರು 11:45ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಈ ದಂಪತಿ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಹಾಯಕ ಕಮಿಷನರ್ (ACP) ಜಯೇಶ ಬ್ರಹ್ಮಭಟ್ ನೀಡಿದ ಮಾಹಿತಿ ಪ್ರಕಾರ, ಬುಧವಾರ ರಾತ್ರಿ ದಂಪತಿ ಸಾಮಾಜಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮನೆಗೆ ಮರಳಿದ್ದರು. ಯಶರಾಜಸಿನ್ಹ ಅವರು ತಮ್ಮ ಬೆಡ್‌ರೂಮ್‌ನಲ್ಲಿ ಪರವಾನಗಿ ಹೊಂದಿದ್ದ ರಿವಾಲ್ವರ್ ಅನ್ನು ಪರಿಶೀಲಿಸುತ್ತಿದ್ದಾಗ, ಆಕಸ್ಮಿಕವಾಗಿ ಹಾರಿದ ಗುಂಡು ಅವರ ಪತ್ನಿ ರಾಜೇಶ್ವರಿ ಅವರ ಕುತ್ತಿಗೆಯ ಭಾಗಕ್ಕೆ ತಗುಲಿದೆ.

ತಕ್ಷಣವೇ ಯಶರಾಜಸಿನ್ಹ ಅವರು ಪಕ್ಕದ ಕೋಣೆಯಲ್ಲಿದ್ದ ತಮ್ಮ ತಾಯಿಗೆ ವಿಷಯ ತಿಳಿಸಿ, ಪತ್ನಿಯನ್ನು ಉಳಿಸಲು ‘108’ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿದ್ದರು. ಆದರೆ ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ರಾಜೇಶ್ವರಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.
ಆಘಾತದಲ್ಲಿ ಆತ್ಮಹತ್ಯೆ
ಪತ್ನಿ ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ತೀವ್ರ ಆಘಾತಕ್ಕೊಳಗಾದ ಯಶರಾಜಸಿನ್ಹ, ವೈದ್ಯಕೀಯ ಸಿಬ್ಬಂದಿ ಮತ್ತು ತಾಯಿಯ ಮುಂದೆಯೇ ಅದೇ ರಿವಾಲ್ವರ್‌ನಿಂದ ತಮಗೆ ತಾವೇ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

“ಪ್ರಾಥಮಿಕ ತನಿಖೆ ಮತ್ತು ಯಶರಾಜಸಿನ್ಹ ಅವರ ತಾಯಿಯ ಹೇಳಿಕೆಯಂತೆ ಇದು ಆಕಸ್ಮಿಕ ಘಟನೆಯೆಂದು ತೋರುತ್ತಿದೆ. ಆದರೂ, ಸತ್ಯಾಸತ್ಯತೆಯನ್ನು ತಿಳಿಯಲು ಎರಡೂ ಮೃತದೇಹಗಳನ್ನು ಫೋರೆನ್ಸಿಕ್ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ,” ಎಂದು ಎಸಿಪಿ ಬ್ರಹ್ಮಭಟ್ ತಿಳಿಸಿದ್ದಾರೆ.
ಗುಜರಾತ್ ಮ್ಯಾರಿಟೈಮ್ ಬೋರ್ಡ್‌ನಲ್ಲಿ ಅಧಿಕಾರಿಯಾಗಿದ್ದ ಯಶರಾಜಸಿನ್ಹ ಅವರ ಈ ಸಾವು ಅವರ ಕುಟುಂಬ ಮತ್ತು ಕಾಂಗ್ರೆಸ್ ವಲಯದಲ್ಲಿ ತೀವ್ರ ಶೋಕ ತಂದಿದೆ. ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಅವರು ಮಾತನಾಡಿ, “ದಂಪತಿ ಅತ್ಯಂತ ಸಂತೋಷದಿಂದ ಸಂಸಾರ ನಡೆಸುತ್ತಿದ್ದರು, ಇದೊಂದು ದುರದೃಷ್ಟಕರ ಆಕಸ್ಮಿಕ,” ಎಂದು ಕಂಬನಿ ಮಿಡಿದಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement