450 ಕೋಟಿ ರೂಪಾಯಿ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಟೈಟಾನ್ಸ್ ನಾಯಕ ಹಾಗೂ ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ನ)ನ ಗುಜರಾತ್ ಟೈಟಾನ್ಸ್ ತಂಡದ ಇತರ ಮೂವರು ಆಟಗಾರರನ್ನು ಗುಜರಾತ್ ಸಿಐಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಶುಭಮನ್ ಗಿಲ್, ಆರಂಭಿಕ ಆಟಗಾರ ಸಾಯಿ ಸುದರ್ಶನ, ಅನ್ ಕ್ಯಾಪ್ಡ್ ರಾಹುಲ್ ತೆವಾಟಿಯಾ ಮತ್ತು ಅನುಭವಿ ಆಟಗಾರ ಮೋಹಿತ್ ಶರ್ಮಾ ಅವರಿಗೆ ಈ ಪ್ರಕರಣದಲ್ಲಿ ಸಮನ್ಸ್ ನೀಡುವ ಸಾಧ್ಯತೆಯಿದೆ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.
ವರದಿಯ ಪ್ರಕಾರ, ಪೊಂಜಿ ಹಗರಣದ ಹಿಂದಿನ ಮಾಸ್ಟರ್ ಮೈಂಡ್ ಭೂಪೇಂದ್ರ ಸಿನ್ಹ ಝಾಲಾ ಅವರು ಈ ನಾಲ್ವರು ಕ್ರಿಕೆಟಿಗರಿಂದ ಮತ್ತು ಹಲವಾರು ಜನರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಪೊಲೀಸ್ ಉಪ ಮಹಾನಿರೀಕ್ಷಕ (ಸಿಐಡಿ-ಅಪರಾಧ) ಪರೀಕ್ಷಿತಾ ರಾಥೋಡ ಅವರ ಪ್ರಕಾರ, ಝಾಲಾ ಕಂಪನಿಯಾದ ಬಿಜೆಡ್ ಫೈನಾನ್ಷಿಯಲ್ ಸರ್ವಿಸಸ್ ನಿಂದ ಹೂಡಿಕೆದಾರರಿಗೆ ಹೆಚ್ಚಿನ ಆದಾಯದ ಭರವಸೆಯ ನೀಡಿ ಹಣವನ್ನು ಹೂಡಿಕೆ ಮಾಡಿಸಲಾಯಿತು. ವಾರ್ಷಕಿವಾಗಿ 36%ರಷ್ಟು ಆದಾಯ ನೀಡುವ ಭರವಸೆ ನೀಡಲಾಯಿತು. ಆದರೆ ಭೂಪೇಂದ್ರ ಸಿನ್ಹ ಝಾಲಾ ಸಂಗ್ರಹಿಸಿದ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಲು ಹಣವನ್ನು ಬಳಸಿದರು ಎಂದು ಆರೋಪಿಸಲಾಗಿದೆ.
ಡಿಸೆಂಬರ್ 27 ರಂದು ಮೆಹ್ಸಾನಾ ಜಿಲ್ಲೆಯಲ್ಲಿ ಬಂಧಿಸುವ ಮೊದಲು ಭೂಪೇಂದ್ರ ಸಿನ್ಹ ಝಾಲಾ ಸುಮಾರು ಒಂದು ತಿಂಗಳ ಕಾಲ ಪರಾರಿಯಾಗಿದ್ದರು. ಪ್ರಸ್ತುತ ಅವರು ಜನವರಿ 4 ರವರೆಗೆ ಕಸ್ಟಡಿಯಲ್ಲಿದ್ದಾರೆ. ಅಹಮದಾಬಾದ್ ಮಿರರ್ ಪ್ರಕಾರ, ಹಗರಣದ ಹಿಂದಿನ ಮಾಸ್ಟರ್ ಮೈಂಡ್ ಭೂಪೇಂದ್ರ ಸಿನ್ಹ ಝಾಲಾ ವಿಚಾರಣೆಯ ಸಮಯದಲ್ಲಿ ಬಹಿರಂಗಗೊಂಡ ಮಾಹಿತಿಯಿಂದ ಈ ತನಿಖೆಯು ಉದ್ಭವಿಸಿದೆ. ಕ್ರಿಕೆಟಿಗರು ಮಾಡಿದ ಹೂಡಿಕೆ ಮಾಡಿದ್ದಕ್ಕೆ ಬಡ್ಡಿ ಹಣ ಸಹ ನೀಡಿಲ್ಲ ಎಂದು ಝಾಲಾ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
450 ಕೋಟಿ ರೂಪಾಯಿ ಚಿಟ್ ಫಂಡ್ ಹಗರಣದ ರೂವಾರಿ ಝಾಲಾ ತಾಲೋಡ್, ಹಿಮ್ಮತ್ನಗರ ಮತ್ತು ವಡೋದರಾ ಸೇರಿದಂತೆ ಗುಜರಾತ್ನ ವಿವಿಧ ಜಿಲ್ಲೆಗಳಲ್ಲಿ ಕಚೇರಿಗಳನ್ನು ನಡೆಸುತ್ತಿದ್ದ ಎಂದು ನಂಬಲಾಗಿದೆ. ಆತ ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಏಜೆಂಟ್ಗಳನ್ನು ನೇಮಿಸಿಕೊಂಡಿದ್ದ, ಐಸಿಐಸಿಐ ಮತ್ತು ಐಎಫ್ಸಿ ಬ್ಯಾಂಕ್ಗಳ ಮೂಲಕ 6,000 ಕೋಟಿ ರೂ.ಗಳ ವಹಿವಾಟು ಮಾಡಿದರು, ಸಂಗ್ರಹವಾಗಿದ್ದರಲ್ಲಿ 175 ಕೋಟಿ ರೂ.ಗಳನ್ನು ಪರಿಶೀಲಿಸಲಾಗುತ್ತಿದೆ.
ಆಟಗಾರರ ಪೈಕಿ, 2024 ರ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಶುಭಮನ್ ಗಿಲ್ ಅವರು ಈ ಯೋಜನೆಯಲ್ಲಿ ರೂ 1.95 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮೋಹಿತ್ ಶರ್ಮಾ, ರಾಹುಲ್ ತೆವಾಟಿಯಾ ಮತ್ತು ಸಾಯಿ ಸುದರ್ಶನ್ ಅವರು ಕಡಿಮೆ ಮೊತ್ತವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವುದರಿಂದ, ಅವರು ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ನಂತರ ಆಟಗಾರರನ್ನು ವಿಚಾರಣೆಗೆ ಕರೆಸಲು ಯೋಜಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ