ಬೆಂಗಳೂರು | ರೌಡಿಶೀಟರ್​ ಕೊಲೆ ಪ್ರಕರಣ : ಬಿಜೆಪಿ ಶಾಸಕ ಭೈರತಿ ಬಸವರಾಜ ಸೇರಿ ಐವರ ವಿರುದ್ಧ ಎಫ್​ಐಆರ್​

ಬೆಂಗಳೂರು: ರೌಡಿಶೀಟರ್​​ ಶಿವಪ್ರಕಾಶ ಅಲಿಯಾಸ್​ ಬಿಕ್ಲು ಶಿವ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ನೀಡಿದ ದೂರಿನ ಮೇರೆಗೆ ಮಾಜಿ ಸಚಿವ ಹಾಗೂ ಕೆ.ಆರ್.ಪುರಂ. ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಸೇರಿ ಐವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಬೆಂಗಳೂರಿನ ಭಾರತೀ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ರೌಡಿಶೀಟರ್ ಶಿವಕುಮಾರ ಅಲಿಯಾಸ್ ಬಿಕ್ಲು ಶಿವ ಹತ್ಯೆ ಹಿಂದೆ ಶಾಸಕ ಭೈರತಿ ಬಸವರಾಜ ಅವರ ಕುಮ್ಮಕ್ಕು ಇದೆ ಎಂದು ಬಿಕ್ಲು ಶಿವ ತಾಯಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದು, ಜಗದೀಶ, ಕಿರಣ, ವಿಮಲ್‌, ಅನಿಲ ಆರೋಪಿಗಳಾಗಿದ್ದಾರೆ ಹಾಗೂ ಭೈರತಿ ಬಸವರಾಜ ಎ5 ಆರೋಪಿ ಎಂದು ತಿಳಿದುಬಂದಿದೆ.
ಹಲಸೂರು ಕೆರೆಯ ಬಳಿ ಮಂಗಳವಾರ ರಾತ್ರಿ ಶಿವಕುಮಾರ ಮನೆಯ ಹೊರಗೆ ನಿಂತಿದ್ದಾಗ 8-9 ಮಂದಿ ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದರು. ದೂರಿನ ಪ್ರಕಾರ, ಶಿವಕುಮಾರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಭಾಗಿಯಾಗಿದ್ದ. ಜಮೀನು ವಿಚಾರವಾಗಿ ಜೀವ ಬೆದರಿಕೆಗಳು ಬರುತ್ತಲೇ ಇದ್ದವು.   ಭೂ ವಿವಾದದ ಕುರಿತಾಗಿ  ತನ್ನ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಪಿಎಲ್‌ ಕಾರ್ಡ್ ಆದಾಯದ ಮಿತಿ 3 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕ್ರಮ ; ಸಚಿವ ಮುನಿಯಪ್ಪ

ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ…
ನನಗೂ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಮಾಜಿ ಸಚಿವ, ಕೆಆರ್‌ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು, ಕೊಲೆಯಾದವನು ಯಾರೆಂದು ಗೊತ್ತಿಲ್ಲ, ಕೊಲೆ ಆರೋಪಿಗಳ ಬಗ್ಗೆಯೂ ನನಗೆ ಗೊತ್ತಿಲ್ಲ. ದೂರು ನೀಡಿದವರೂ ಯಾರೆಂದು ಗೊತ್ತಿಲ್ಲ. ಯಾರೋ ಸಖಾಸುಮ್ಮನೆ ದೂರು ನೀಡಿದರೂ ಎಫ್‌ಎಆರ್ ದಾಖಲಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ನನಗೆ ಈ ವಿಚಾರ ಗೊತ್ತಾಯಿತು. ನನಗೆ ಸಂಬಂಧ ಇಲ್ಲದ ಪ್ರಕರಣದಲ್ಲಿ ನನ್ನ ಹೆಸರು ಬಂದಿದೆ. ಎಫ್‌ಐಆರ್‌ನಿಂದ ನನ್ನ ಹೆಸರು ತೆಗೆಯಲು ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement