ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆ

ನವದೆಹಲಿ: ಹಲವು ದಿನಗಳ ಕಾಲ ವಿರಾಮ ನೀಡಿದ್ದ ನೈಋತ್ಯ ಮುಂಗಾರು ಇದೀಗ ಮತ್ತೆ ದೇಶಾದ್ಯಂತ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ದೇಶದಾದ್ಯಂತ ದಟ್ಟ ಮೋಡಗಳು ಆವರಿಸಿರುವುದನ್ನು ತೋರಿಸುವ ವಿಶೇಷ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಈ ಚಿತ್ರಗಳನ್ನು ಇಸ್ರೋದ ಅತ್ಯಾಧುನಿಕ ಇನ್ಸಾಟ್‌-3ಡಿಎಸ್‌ (INSAT-3DS) ಹವಾಮಾನ ಉಪಗ್ರಹವು ಜುಲೈ 22ರಂದು ಮಧ್ಯಾಹ್ನ 3ರಿಂದ 3:27 ಗಂಟೆಯವರೆಗೆ (ಭಾರತೀಯ ಕಾಲಮಾನ) ದಾಖಲಿಸಿದೆ.
ಐಎಂಡಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಮುಂದಿನ 3-4 ದಿನಗಳ ಕಾಲ ವಾಯವ್ಯ ಭಾರತ, ಮಧ್ಯ ಭಾರತ, ಉತ್ತರ ಪರ್ಯಾಯ ದಕ್ಷಿಣ ದ್ವೀಪಕಲ್ಪ ಪ್ರದೇಶಗಳು, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮುಂಗಾರು ಅತ್ಯಂತ ಸಕ್ರಿಯವಾಗಿರಲಿದೆ” ಎಂದು ತಿಳಿಸಿದೆ.

ಉಪಗ್ರಹ ಚಿತ್ರದಲ್ಲಿ ಕಂಡುಬಂದ ವಿಶೇಷತೆ
ಐಎಂಡಿ ಬಿಡುಗಡೆ ಮಾಡಿದ ಥರ್ಮಲ್ ಇನ್‌ಫ್ರಾರೆಡ್ (Thermal Infrared) ಚಿತ್ರದಲ್ಲಿ, ಉತ್ತರ ಬಂಗಾಳ ಕೊಲ್ಲಿಯಿಂದ ಆರಂಭವಾಗಿ ಒಡಿಶಾ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದ ಮೂಲಕ ಗುಜರಾತ್ ಮತ್ತು ಅರಬ್ಬಿ ಸಮುದ್ರದವರೆಗೆ ವಿಸ್ತರಿಸಿರುವ (Curved) ದಟ್ಟ ಮೋಡಗಳ ಪಟ್ಟೆ ಸ್ಪಷ್ಟವಾಗಿ ಗೋಚರಿಸಿದೆ.
ಚಿತ್ರಗಳ ವಿವರಣೆ ನೀಡಿರುವ ಐಎಂಡಿ, ವಿವಿಧ ಬಗೆಯ ಮೋಡಗಳು ಅವುಗಳ ಭೌತಿಕ ಗುಣಲಕ್ಷಣಗಳಾದ ಮಳೆ ಹನಿಗಳು ಅಥವಾ ಹಿಮದ ಕಣಗಳ ಪ್ರಮಾಣ, ಅವುಗಳ ಗಾತ್ರ ಹಾಗೂ ಮೋಡಗಳ ಸಾಂದ್ರತೆ ಆಧರಿಸಿ ವಿಭಿನ್ನ ರೀತಿಯಲ್ಲಿ ಪ್ರತಿಫಲಿಸುತ್ತವೆ ಎಂದು ವಿವರಿಸಿದೆ.

ಪ್ರಮುಖ ಸುದ್ದಿ :-   ಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆ

ಕ್ಯುಮುಲೋನಿಂಬಸ್ (Cumulonimbus) ಮೋಡಗಳು ಅತ್ಯಂತ ಪ್ರಕಾಶಮಾನವಾಗಿ ಕಾಣಿಸುತ್ತವೆ. ಕ್ಯುಮುಲಸ್, ಸ್ಟ್ರಾಟಸ್ ಹಾಗೂ ಸ್ಟ್ರಾಟೋಕ್ಯುಮುಲಸ್ ಮಾದರಿಯ ದಪ್ಪ (ಕೆಳ ಹಾಗೂ ಮಧ್ಯಮ ಮಟ್ಟದ) ಮೋಡಗಳು, ಮೇಲ್ಮಟ್ಟದಲ್ಲಿರುವ ತೆಳುವಾದ ಸಿರಸ್ (Cirrus) ಮೋಡಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುತ್ತವೆ. ಸಮುದ್ರದ ಮೇಲ್ಮೈ ಈ ಚಿತ್ರಗಳಲ್ಲಿ ಹೆಚ್ಚು ಗಾಢ ಬಣ್ಣದಲ್ಲಿ ಕಾಣಿಸುತ್ತದೆ ಎಂದು ಐಎಂಡಿ ತಿಳಿಸಿದೆ.
2026ರ ನೈಋತ್ಯ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಹವಾಮಾನ ಮಾದರಿಗಳು (Climate Models) ಅಂದಾಜಿಸಿತ್ತು. ಆದರೆ ಪ್ರಸ್ತುತ ದೇಶದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡಗಳು ಆವರಿಸಿದ್ದು, ವ್ಯಾಪಕ ಮಳೆಯ ನಿರೀಕ್ಷೆ ಮೂಡಿದೆ.

ಜುಲೈ 24ರವರೆಗೆ ಭಾರೀ ಮಳೆಯ ಎಚ್ಚರಿಕೆ
ಐಎಂಡಿ ಪ್ರಕಾರ, ಜುಲೈ 24ರವರೆಗೆ ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಮಳೆ ಹಾಗೂ ತೀವ್ರ ಹವಾಮಾನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಅಲ್ಲಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ವಿಶೇಷವಾಗಿ ಭಾರತದ ಕರ್ನಾಟಕದ ಕರಾವಳಿ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿಯನ್ನೊಳಗೊಂಡ ಕೊಂಕಣ ಪ್ರದೇಶದ ಹಲವೆಡೆ, ನೈಋತ್ಯ ಮಧ್ಯಪ್ರದೇಶದ ಹಲವೆಡೆ, ಆಗ್ನೇಯ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಲಡಾಖಿನ ಹಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.
ಇದರ ಜೊತೆಗೆ ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಲಿದ್ದು, ಜುಲೈ 24ರವರೆಗೆ ಗುಜರಾತ್ ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ. ಇನ್ನೊಂದೆಡೆ, ದಕ್ಷಿಣ ಭಾರತದ ಹಲವೆಡೆ ಮುಂದಿನ ಒಂದು ವಾರ ಮಳೆ ತುಸು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮ : ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ದೇಶದ ಕೃಷಿಗೆ  ಜೀವನಾಡಿ
ನೈಋತ್ಯ ಮುಂಗಾರು ಭಾರತದ ವಾರ್ಷಿಕ ಮಳೆಯ ಸುಮಾರು 75 ಪ್ರತಿಶತವನ್ನು ಪೂರೈಸುತ್ತದೆ. ಇದು ನೀರಾವರಿ, ಕುಡಿಯುವ ನೀರಿನ ಪೂರೈಕೆ ಹಾಗೂ ಜಲವಿದ್ಯುತ್ ಉತ್ಪಾದನೆಗೆ ಅತ್ಯಂತ ಮಹತ್ವದ್ದಾಗಿದೆ.
ಪ್ರತಿ ವರ್ಷ ಮುಂಗಾರು ಜೂನ್ ಆರಂಭದಲ್ಲಿ ಕೇರಳ ಪ್ರವೇಶಿಸಿ, ಜುಲೈ ಮಧ್ಯಭಾಗದ ವೇಳೆಗೆ ದೇಶದ ಬಹುತೇಕ ಪ್ರದೇಶಗಳನ್ನು ಆವರಿಸುತ್ತದೆ. ಭತ್ತ, ಹತ್ತಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳ ಬೆಳವಣಿಗೆಗೆ ಇದು ಅತ್ಯಗತ್ಯವಾಗಿದ್ದು, ಮುಂಗಾರು ವಿಳಂಬವಾದರೆ ಅಥವಾ ವಿಫಲವಾದರೆ ಆಹಾರ ಭದ್ರತೆ, ರೈತರ ಜೀವನೋಪಾಯ ಹಾಗೂ ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement