ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಟ್ರಸ್ಟಿಗಳ ಸಭೆಯಲ್ಲಿ ನಿರ್ಧಾರ

ದಾವಣಗೆರೆ : ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಖ್ಯಾತ ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂದು, ಸೋಮವಾರ ಮಠದಲ್ಲಿ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 12 ಟ್ರಸ್ಟಿಗಳು ಉಚ್ಛಾಟನೆಗೆ ಸಹಮತ ಸೂಚಿಸಿದ್ದಾರೆ ಎಂದು ಟ್ರಸ್ಟಿ ಬಸವರಾಜ ದಿಂಡೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪಂಚಮಸಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪಮಾತನಾಡಿ, ‘ಸ್ವಾಮೀಜಿಗಳನ್ನು ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸ್ವಾಮೀಜಿಗಳಿಗೆ ಒಂದು ನಿರ್ಣಯಕ್ಕೆ ಬನ್ನಿ ಎಂದು ಗಡುವು ನೀಡಿದ್ದೆವು. ನೀವು ಶ್ವಾಸ ಪೀಠದಲ್ಲಿ ಇರಬೇಕು ಇಲ್ಲವೇ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು ಎಂದು ಅವರಿಗೆ ತಿಳಿಸಲಾಗಿತ್ತು. ಮಾರ್ಚ್ 24ಕ್ಕೆ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಅಂತಿಮ ಗಡುವು ನೀಡಲಾಗಿತ್ತು. ಆದರೆ, ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿದ ಕಾರಣ ಅವರನ್ನು ಪೀಠದಿಂದ ತೆಗೆದುಹಾಕುವ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಮಠದ ಸುತ್ತಲು ನಿಷೇದಾಜ್ಞೆ ಜಾರಿ:
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳಿಗೆ ‘ಲೆಕ್ಕ ಕೊಡಿ’ ಎಂದು ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ. ತಹಶೀಲ್ದಾರ್ ಮಠದ ಸುತ್ತಲು ನಿಷೇದಾಜ್ಞೆ ಜಾರಿ ಮಾಡಿದ್ದಾರೆ.
ಪೊಲೀಸ್ ಸರ್ಪಗಾವಲಿನಲ್ಲಿ 13 ಜನ ಟ್ರಸ್ಟಿಗಳು ಸಭೆ ಮಾಡಿ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟನೆ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ಭಕ್ತರು ಮಠಕ್ಕೆ ನೀಡಿದ ದೇಣಿಗೆಯಲ್ಲಿ ಟ್ರಸ್ಟಿಗಳಿಂದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.‌ ಇದರ ನಂತರ ಭಕ್ತರು ಲೆಕ್ಕ ಕೊಡಿ ಎಂದು ಪ್ರತಿಭಟನೆ ಮಾಡಿದ್ದರು. ಈಗಲೂ ಮಠದ ಹೊರಗೆ ನೂರಾರು ಭಕ್ತರು ಸೇರಿ ಟ್ರಸ್ಟಿಗಳೇ ಲೆಕ್ಕಕೊಡಿ ಎಂದು ಪ್ರತಿಭಟನೆ ನಡೆಸಿದರು.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement