ಕೊಚ್ಚಿ: ಕೇರಳದ ಖ್ಯಾತ ಮುಸ್ಲಿಂ ಧರ್ಮಗುರು ಮಹಿಳೆಯರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಿಳೆಯರು ಮನೆಗಳಲ್ಲೇ ಉಳಿಯಬೇಕು ಹಾಗೂ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರಿಂದ “ದೊಡ್ಡ ವಿನಾಶ” ಉಂಟಾಗುತ್ತದೆ ಎಂದು ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (95) ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಸಿಪಿಐ(ಎಂ) ಮತ್ತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಮುಸ್ಲಿಯಾರ್, ರಾಜ್ಯದ ಪ್ರಮುಖ ಸುನ್ನಿ-ಶಾಫಿ ವಿದ್ವಾಂಸರ ಮಂಡಳಿಯು ಕೆಲ ದಿನಗಳ ಹಿಂದೆ ಮಹಿಳೆಯರು ಪುರುಷರ ಜೊತೆ ಒಂದೇ ವೇದಿಕೆಯನ್ನು ಹಂಚಿಕೊಳ್ಳಬಾರದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅವರ ಜೊತೆ ಕಾಣಿಸಿಕೊಳ್ಳಬಾರದು ಎಂದು ನೀಡಿದ್ದ ನಿರ್ದೇಶನವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮವು ಮಹಿಳೆಯರಿಗಾಗಿ ‘ಪರ್ದಾ’ ಪದ್ಧತಿಯನ್ನು ನಿಗದಿಪಡಿಸಿದ್ದು, ಅದಕ್ಕೆ ಇದೇ ಕಾರಣ ಎಂದು ಹೇಳಿದರು. ಶೇಖ್ ಅಬೂಬಕರ್ ಅಹ್ಮದ್ ಎಂದೂ ಕರೆಯಲ್ಪಡುವ ಮುಸ್ಲಿಯಾರ್ ಅವರು ಭಾರತದ 10ನೇ ಗ್ರ್ಯಾಂಡ್ ಮುಫ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಮಹಿಳೆಯರನ್ನು ಈ ರೀತಿಯಾಗಿ ಸಾರ್ವಜನಿಕ ವೇದಿಕೆಗಳಿಗೆ ಕರೆತರುವುದರಿಂದ ದೊಡ್ಡ ಅನಾಹುತ ಉಂಟಾಗುತ್ತದೆ ಎಂಬುದನ್ನು ಅರಿತಿದ್ದರಿಂದಲೇ ಇಸ್ಲಾಂ ಮಹಿಳೆಯರಿಗೆ ಪರ್ದಾವನ್ನು ಕಡ್ಡಾಯಗೊಳಿಸಿದೆ. ಪವಿತ್ರ ಕುರಾನ್ ಮಹಿಳೆಯರು ತಮ್ಮ ಮನೆಗಳಲ್ಲೇ ವಾಸಿಸಬೇಕು ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ಹೇಳುತ್ತದೆ” ಎಂದು ಅವರು ಹೇಳಿದರು.
ಕಳೆದ 100 ವರ್ಷಗಳಿಂದ ಧಾರ್ಮಿಕ ವಿದ್ವಾಂಸರು, ವಿಶೇಷವಾಗಿ ಸಮಸ್ತ ಸಂಘಟನೆಯ ನಾಯಕರು ಇದೇ ವಿಚಾರವನ್ನು ಬೋಧಿಸುತ್ತಾ ಬಂದಿದ್ದಾರೆ ಎಂದು ಮುಸ್ಲಿಯಾರ್ ಹೇಳಿದರು.
“ಈ ದೇಶದ ಮಹಿಳೆಯರು ತಮ್ಮ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡಿರುವುದು, ಸಮಸ್ತದ ನಾಯಕರನ್ನು ಒಳಗೊಂಡಂತೆ ಜ್ಞಾನಿಗಳೆಲ್ಲರೂ ಕಳೆದ 100 ವರ್ಷಗಳಿಂದ ಇದೇ ಬೋಧನೆ ಮಾಡಿದ್ದರಿಂದ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಈ ವಿಚಾರದಲ್ಲಿ ಟೀಕೆಗಳು ಬಂದರೂ ಧಾರ್ಮಿಕ ಪಂಡಿತರಿಗೆ ತಮ್ಮ ನಿಲುವು ಹೇಳುವ ಜವಾಬ್ದಾರಿ ಇದೆ ಎಂದು ಅವರು ಸ್ಪಷ್ಟಪಡಿಸಿದರು. “ಇದನ್ನು ಹೇಳಿದಾಗ ಬೇರೆ ಸಂಘಟನೆಗಳ ನಾಯಕರು ಅಥವಾ ಸಮಸ್ತದ ನಾಯಕರು ವಿರೋಧಿಸಿದರೂ, ನಾವು ಧರ್ಮವನ್ನು ಅಧ್ಯಯನ ಮಾಡಿದ್ದೇವೆ. ಆದ್ದರಿಂದ ಇದನ್ನು ಹೇಳುವ ಹೊಣೆಗಾರಿಕೆ ನಮ್ಮದು. ನಾವು ಹೇಳುತ್ತೇವೆ, ಮುಂದೆಯೂ ಹೇಳುತ್ತೇವೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ,” ಎಂದು ಮುಸ್ಲಿಯಾರ್ ಹೇಳಿದರು.
ಈ ಹಿಂದೆ ಕೂಡ ವಿವಾದಾತ್ಮಕ ಹೇಳಿಕೆಗಳು
ಮಹಿಳೆಯರ ಕುರಿತಾಗಿ ಮುಸ್ಲಿಯಾರ್ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. 2015ರಲ್ಲಿ ಅವರು “ಲಿಂಗ ಸಮಾನತೆ ಇಸ್ಲಾಂಗೆ ವಿರುದ್ಧ” ಎಂದು ಹೇಳಿಕೆ ನೀಡಿದ್ದು, ನಂತರ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳಲ್ಲಿ ಮಹಿಳೆಯರು ಬೀದಿಗಿಳಿಯಬಾರದು ಎಂದು ಹೇಳಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು. 2025ರಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ವ್ಯಾಯಾಮ ಮಾಡುವ ಫಿಟ್ನೆಸ್ ಕಾರ್ಯಕ್ರಮವನ್ನೂ ಇಸ್ಲಾಮಿಕ್ ನಿಯಮಗಳಿಗೆ ವಿರುದ್ಧ ಎಂದು ಅವರು ವಿರೋಧಿಸಿದ್ದರು.
ಸಿಪಿಐ(ಎಂ), ಬಿಜೆಪಿ ತೀವ್ರ ವಿರೋಧ
ಮುಸ್ಲಿಯಾರ್ ಅವರ ಇತ್ತೀಚಿನ ಹೇಳಿಕೆಗೆ ಸಿಪಿಐ(ಎಂ) ನಾಯಕಿ ಪಿ.ಕೆ. ಶ್ರೀಮತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಮಹಿಳೆಯರನ್ನು ಗೌರವ ಮತ್ತು ಪರಿಗಣನೆಯೊಂದಿಗೆ ನಡೆಸಿಕೊಳ್ಳುವಂತೆ ಬೋಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ಯಾರು ಇಂತಹ ಹೇಳಿಕೆ ನೀಡಿದರೂ, ಅವರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಮಹಿಳೆಯರು ಹೊರಗೆ ಬರಬಾರದು ಎಂಬ ಅಭಿಪ್ರಾಯವನ್ನು ನಾನು ಒಪ್ಪಲಾರೆ ಎಂದು ಅವರು ಹೇಳಿದರು. ಅವರು ಈ ಹೇಳಿಕೆ “ಅವಮಾನಕಾರಿ ಮತ್ತು ಮಹಿಳೆಯರನ್ನು ಕೀಳಾಗಿ ಕಾಣುವ ಹೇಳಿಕೆ” ಎಂದು ಬಣ್ಣಿಸಿದ ಅವರು, ಅವರು ಹೇಳಿಕೆಯನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದರು.
ಸಿಪಿಐ(ಎಂ) ಹಿರಿಯ ನಾಯಕಿ ಕೆ.ಕೆ. ಶೈಲಜಾ ಕೂಡ ಮಹಿಳೆಯರು ಮನೆಗಳಲ್ಲೇ ಇರಬೇಕು ಎಂಬ ಅಭಿಪ್ರಾಯವನ್ನು ಟೀಕಿಸಿ, ಅದನ್ನು “ಊಳಿಗಮಾನ್ಯ ಮನೋಭಾವದ ಸಂಪ್ರದಾಯ” ಎಂದು ಕರೆದರು. ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ದೀರ್ಘ ಇತಿಹಾಸ ಹೊಂದಿರುವ ಸಂಘಟನೆಯೊಂದರಿಂದ ಇಂತಹ ನಿರ್ದೇಶನ ಹೊರಬಂದಿರುವುದನ್ನು ಅವರು ಪ್ರಶ್ನಿಸಿದರು.
ಇನ್ನೊಂದೆಡೆ, ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಅವರು, ಮಹಿಳೆಯರಿಗೆ “ಕಲಿಯುವ, ಸಂಭ್ರಮಿಸುವ, ಮುನ್ನಡೆಸುವ, ಕನಸು ಕಾಣುವ ಮತ್ತು ಸಂಪೂರ್ಣ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕುವ” ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿದರು.
ಧಾರ್ಮಿಕ ಮುಖಂಡರ ಆದೇಶಗಳನ್ನು ಸಮಾಜದ ಮೇಲೆ ಹೇರಲು ಮಾಡುವ ಪ್ರಯತ್ನಗಳನ್ನು ಅವರು ವಿರೋಧಿಸಿದರು. ಮಹಿಳೆಯರನ್ನು “ಮಧ್ಯಯುಗದ ಜೀವನಕ್ಕೆ” ತಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಹಾಗೂ ಎನ್ಡಿಎ ತಡೆಯಲಿವೆ ಎಂದು ಅವರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ