ಧಾರವಾಡ ಐಐಐಟಿಗೆ ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ಮುರ್ಮು ಭೇಟಿ: ಬುಡಕಟ್ಟು ಭಾಷೆಗಳಿಗೆ ಧ್ವನಿ ಭಾಷಾನುವಾದ ಮಾಡುವ ರೋಬೋಟ್ ಅಭಿವೃದ್ಧಿ…!

ಧಾರವಾಡ: ಇಲ್ಲಿನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ (ಐಐಐಟಿ) ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿರಾಷ್ಟ್ರಪತಿಗಳ ಮೂಲ ರಾಜ್ಯವಾದ ಒಡಿಸ್ಸಾ ಹಾಗೂ ಕರ್ನಾಟಕದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26ರಂದು ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸಂಸ್ಥೆ ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮನೊಯ್ಡ್‌ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಮುಂದೆ ಪ್ರದರ್ಶಿಸಲಾಗುತ್ತದೆ. ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಇದು ಇಂಗ್ಲಿಷ್‌ ಭಾಷೆಯಲ್ಲಿನ ಜ್ಞಾನವನ್ನು ಒರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿಹಾಗೂ ಸೋಲಿಗ ಭಾಷೆಗಳಿಗೆ ಭಾಷಾಂತರ ಮಾಡಲಿದೆ ಎಂದು ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಟಿ.ದೀಪಕ ತಿಳಿಸಿದ್ದಾರೆ.

ಪ್ರಸ್ತುತ ಈ ರೋಬೋಟ್ ತಂತ್ರಜ್ಞಾನದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿ ಬುಡಕಟ್ಟು ಜನರಿಗೆ ಬುಡಕಟ್ಟಿನ
ಭಾಷೆಯಲ್ಲಿಯೇ ದೊರೆಯುವಂತೆ ಮಾಡಲಿದೆ. ಈ ಯೋಜನೆಯಲ್ಲಿ ಒರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲಿಷ್‌ ಭಾಷೆಯಿಂದ ಹೇಳಲ್ಪಟ್ಟ ಧ್ವನಿಯನ್ನು ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಹೇಳಿದ ಧ್ವನಿಯನ್ನು ಇಂಗ್ಲಿಷ್‌ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ದೀಪಕ್ ತಿಳಿಸಿದ್ದಾರೆ.
ಧಾರವಾಡದ ಐಐಐಟಿಯು ಹೈದರಾಬಾದ್ ಹಾಗೂ ಭುವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ.ಪ್ರಕಾಶ ಪವಾರ ಹಾಗೂ ಡಾ. ಸಿಬಾ ಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ 44.53 ಲಕ್ಷ ರೂ.ಗಳ ಅನುದಾನ ನೀಡಿದೆ.

ಪ್ರಮುಖ ಸುದ್ದಿ :-   ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವು

ಮಾನವರೂಪಿ ರೋಬೋಟ್:
ಸ್ವಯಂಚಾಲಿತ ಮಾನವರೂಪಿ ರೋಬೋಟ್‌ನ್ನು ಸಹ ಐಐಐಟಿ ಧಾರವಾಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಸಂಶೊಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂಥ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟನ್ನು ತಯಾರಿಸುವುದಾಗಿದೆ. ಅದಲ್ಲದೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಮಾರ್ಪಾಡು ಮಾಡುವ ಮೂಲಕ ಇತರ ಉಪಯೋಗಗಳಿಗೂ ಇದನ್ನು ಬಳಸಬಹುದಾಗಿದೆ ಎಂದು ಹೇಳಲಾಗಿದೆ.
ಈ ರೋಬೋಟ್ ನಿಯಮಿತ ಕೆಲಸಗಳನ್ನು ಮಾಡುವ ಸಾಮರ್ಥ್ಯದ ಜೊತೆಗೆ ಬಹುವಿಧಗಳಿಂದ
ಸಂವಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ರೋಬೋಟ್ ಅಲ್ಪ ಸಮಯದಲ್ಲಿ ತಯಾರಿಸುವುದು ಕಷ್ಟಸಂಗತಿ ಎಂದು
ಡಾ.ಕೆ.ಟಿ.ದೀಪಕ್ ತಿಳಿಸಿದ್ದಾರೆ. ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ. ಕವಿ ಮಹೇಶ, ಡಾ.ರಾಜೇಂದ್ರ ಹೆಗಡಿ, ಡಾ.ಪವನಕುಮಾರ್ ಸಿ, ಡಾ.ರಮೇಶ ಆತೆ, ಡಾ.ಚಿನ್ಮಯಾನಂದ ಎ. ಅವರು ತೊಡಗಿಸಿಕೊಂಡಿದ್ದಾರೆ.

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement