ಶಿಮ್ಲಾ: ರಾಜ್ಯದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ಉದ್ದೇಶದಿಂದ ಹಿಮಾಚಲ ಪ್ರದೇಶ ಸರ್ಕಾರವು ಹಿರಿಯ ಶ್ರೇಣಿ ಸರ್ಕಾರಿ ಅಧಿಕಾರಿಗಳ ವೇತನದ ಶೇಕಡಾ 30ರಷ್ಟನ್ನು ಸದ್ಯಕ್ಕೆ ಕಡಿತ ಮಾಡಲು ನಿರ್ಧರಿಸಿದೆ. ಏಪ್ರಿಲ್ ತಿಂಗಳಿಂದ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳವನ್ನು ಮಾತ್ರ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ.
ರಾಜ್ಯದ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವ ಪ್ರಯತ್ನವಾಗಿ ಮುಂದಿನ ಆರು ತಿಂಗಳ ಕಾಲ ಇದು ಜಾರಿಯಲ್ಲಿರಲಿದೆ ಎಂದು ಸರ್ಕಾರ ತಿಳಿಸಿದೆ. ಭಾನುವಾರ ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದು ಕಡಿತವಲ್ಲ, ಇದು ವೇತನ ಕಡಿತವಲ್ಲ, ಕೇವಲ “ಮುಂದೂಡಿಕೆ” (Deferment). ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಈ ಬಾಕಿ ಮೊತ್ತವನ್ನು ನೌಕರರಿಗೆ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಆದೇಶವು ಮೇ 2026 ರಿಂದ ಜಾರಿಗೆ ಬರಲಿದ್ದು, ಇದು ತಾತ್ಕಾಲಿಕ ಕ್ರಮವಾಗಿದೆ. ಅಧಿಕಾರಿಗಳ ಶ್ರೇಣಿಗೆ ಅನುಗುಣವಾಗಿ ಜಾರಿಗೆ ತರಲಾಗುತ್ತದೆ.
ಶೇ.30ರಷ್ಟು ಕಡಿತ: ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಡಿಜಿಪಿ (DGP), ಎಡಿಜಿಪಿ (ADGP), ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಶೇ. 30ರಷ್ಟು ಸಂಬಳ ಕಡಿತವಾಗಲಿದೆ.
ಶೇ. 20ರಷ್ಟು ಕಡಿತ: ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಐಜಿಪಿ (IGP), ಡಿಐಜಿ (DIG), ಎಸ್ಪಿ (SP) ದರ್ಜೆಯ ಪೊಲೀಸ್ ಅಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಮಟ್ಟದವರೆಗಿನ ಅಧಿಕಾರಿಗಳಿಗೆ ಸಂಬಳದ ಶೇ. 20ರಷ್ಟು ಕಡಿತವಾಗಲಿದೆ.
ಪಾವತಿಸಿದ ವೇತನ ಮತ್ತು ಮುಂದೂಡಲ್ಪಟ್ಟ ವೇತನದ ವಿವರಗಳನ್ನು ಪಾರದರ್ಶಕತೆಗಾಗಿ ಪೇ-ಸ್ಲಿಪ್ನಲ್ಲಿ ಸ್ಪಷ್ಟವಾಗಿ ತೋರಿಸಲಾಗುತ್ತದೆ. ಸದ್ಯಕ್ಕೆ ಕಡಿತವಾಗುವ ಈ ಮುಂದೂಡಲ್ಪಟ್ಟ ವೇತನವನ್ನು ಪಿಂಚಣಿ ಸೌಲಭ್ಯಗಳು, ರಜೆ ನಗದೀಕರಣ ಮುಂತಾದವುಗಳಿಗೆ ಪರಿಗಣಿಸಲಾಗುತ್ತದೆ.
ಕಾಯಂ ಕಡಿತಗಳು: ಆದಾಯ ತೆರಿಗೆ, ಪಿಂಚಣಿ ಯೋಜನೆ (NPS/UPS) ಮತ್ತು ಪ್ರೊವಿಡೆಂಟ್ ಫಂಡ್ (GPF) ಕಡಿತಗಳನ್ನು ಪೂರ್ಣ ವೇತನದ ಮೇಲೆಯೇ ಲೆಕ್ಕಹಾಕಲಾಗುತ್ತದೆ.
ಮಂಡಳಿ ಮತ್ತು ನಿಗಮಗಳಿಗೂ ಅನ್ವಯ
ಸರ್ಕಾರದಿಂದ ಅನುದಾನ ಅಥವಾ ಬಜೆಟ್ ಬೆಂಬಲ ಪಡೆಯುವ ಎಲ್ಲಾ ಮಂಡಳಿಗಳು, ನಿಗಮಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (PSU), ಸ್ವಾಯತ್ತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಸರ್ಕಾರದ ಈ ನಿರ್ಧಾರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸಲಾಗಿದೆ.
ಕಳೆದ ಮಾರ್ಚ್ 21 ರಂದು 2026-27ರ ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಸುಖವಿಂದರ ಸಿಂಗ್ ಸುಖು ಅವರು ಈ ಘೋಷಣೆ ಮಾಡಿದ್ದರು. ಈಗಾಗಲೇ ಮುಖ್ಯಮಂತ್ರಿಗಳ ವೇತನದಲ್ಲಿ ಶೇ. 50, ಸಚಿವರ ವೇತನದಲ್ಲಿ ಶೇ. 30 ಮತ್ತು ಶಾಸಕರ ವೇತನದಲ್ಲಿ ಶೇ. 20 ರಷ್ಟು ವೇತನವನ್ನುತಾತ್ಕಾಲಿಕವಾಗಿ ಕಡಿತ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ