ಸದನದಲ್ಲಿ ಭಾಷಣ-ಮತಕ್ಕಾಗಿ ಲಂಚ : ಸಂಸದರು-ಶಾಸಕರಿಗೆ ಯಾವುದೇ ವಿನಾಯ್ತಿ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, 1998ರ ತೀರ್ಪು ರದ್ದು

ನವದೆಹಲಿ: ಸಂಸದರು (ಎಂಪಿಗಳು) ಮತ್ತು ವಿಧಾನಸಭೆಗಳ ಸದಸ್ಯರು (ಎಂಎಲ್‌ಎಗಳು) ಲಂಚ ಪಡೆದ ಆರೋಪ ಬಂದಾಗ ಸಂವಿಧಾನದ 105 ಮತ್ತು 194 ನೇ ವಿಧಿಯ ಅಡಿಯಲ್ಲಿ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಸಂಸತ್ತಿನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಏಳು ಮಂದಿ ಇದ್ದ ಸಾಂವಿಧಾನಿಕ ಪೀಠವು, 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಪಂಚ ಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಸರ್ವಾನುಮತದಿಂದ ರದ್ದು ಮಾಡಿತು.
ಶಾಸಕರು ಹಾಗೂ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಈ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಪಡಿಸಿದೆ. ಸಂಸತ್ ಸದಸ್ಯರು ಹಾಗೂ ರಾಜ್ಯಗಳ ವಿಧಾನ ಮಂಡಲದ ಸದಸ್ಯರು ಲಂಚ ಪಡೆದಾಗ, ಭ್ರಷ್ಟಾಚಾರ ಎಸಗಿದಾಗ ಅವರ ವಿರುದ್ಧ ತನಿಖೆ ನಡೆಯದಂತೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್‌ ಶಾಕ್ ಕೊಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯಕುಮಾರ ಮತ್ತು ಮನೋಜ ಮಿಶ್ರಾ ಅವರಿದ್ದ ಏಳು ಸದಸ್ಯರ ಸಾಂವಿಧಾನಿಕ ಪೀಠ ಇಂದು, ಸೋಮವಾರ ಈ ಮಹತ್ವದ ತೀರ್ಪು ನೀಡಿದ್ದು, ಕಾನೂನು ಕ್ರಮದಿಂದ ವಿನಾಯಿತಿ ನೀಡುವ 1998 ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಸಾಂವಿಧಾನಿಕ ಹೇಳಿದೆ.
ಆರ್ಟಿಕಲ್ 105(2) ಸಂಸತ್ತಿನಲ್ಲಿ ಅಥವಾ ಯಾವುದೇ ಸಂಸದೀಯ ಸಮಿತಿಯಲ್ಲಿ ಲಂಚ ಪಡೆದು ಮತ ಹಾಕುವ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮದಿಂದ ಸಂಸತ್ತಿನ ಸದಸ್ಯರಿಗೆ (MPs) ವಿನಾಯಿತಿ ನೀಡುತ್ತದೆ. ಆರ್ಟಿಕಲ್ 194(2) ಶಾಸಕಾಂಗ ಸಭೆಗಳ ಸದಸ್ಯರಿಗೆ (ಎಂಎಲ್‌ಎ) ಇದೇ ರೀತಿಯ ರಕ್ಷಣೆ ನೀಡುತ್ತದೆ.
1998 ರ ಪಿ.ವಿ. ನರಸಿಂಹ ರಾವ್ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಪಕ್ಕಕ್ಕೆ ಸರಿಸಿದೆ. 1998ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ, ಸಂಸದರು ಹಾಗೂ ಶಾಸಕರು ಲಂಚ ಪಡೆದು ಭಾಷಣ ಮಾಡಿದ್ದರೆ ಅಥವಾ ಮತ ಹಾಕಿದ್ದರೆ ಅವರಿಗೆ ಲಂಚ ಪ್ರಕರಣದ ತನಿಖೆ ಅಡಿ ಕಾನೂನಿನ ರಕ್ಷಣೆ ಸಿಗುತ್ತಿತ್ತು. ಈಗ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು ಶಾಸಕರು ಹಾಗೂ ಸಂಸದರಿಗೆ ಇದ್ದ ಆ ಸವಲತ್ತನ್ನು ರದ್ದು ಮಾಡಿದೆ.

ಸಂಸತ್ತಿನಲ್ಲಿ ಅಥವಾ ಶಾಸಕಾಂಗ ಸಭೆಯಲ್ಲಿ ಹೇಳುವ ಅಥವಾ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ 105 (2) ಮತ್ತು 194 (2) ವಿಧಿಗಳ ಅಡಿಯಲ್ಲಿ ಶಾಸಕರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ನ್ಯಾಯಾಲಯವು ವಿವರಿಸಿತು. ಪಿವಿ ನರಸಿಂಹ ರಾವ್‌ ಪ್ರಕರಣದ ತೀರ್ಪನ್ನು ನಾವು ಒಪ್ಪುವುದಿಲ್ಲ. ಮತ ಚಲಾಯಿಸಲು ಲಂಚ ಪಡೆದಿದ್ದಕ್ಕಾಗಿ ಶಾಸಕರಿಗೆ ವಿನಾಯಿತಿ ನೀಡಿದ ಆ ಪ್ರಕರಣದ ತೀರ್ಪು ನೈತಿಕತೆ ಹಾನಿಯಾಗುವ ಪರಿಣಾಮವನ್ನು ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ನಾಶಪಡಿಸುವುದರಿಂದ, ಈ ವಿಧಿಗಳಡಿ ಅದು ವಿನಾಯಿತಿ ಹೊಂದಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ಜುಲೈ 1993 ರಲ್ಲಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಪಿ.ವಿ.ನರಸಿಂಹರಾವ್ ಪ್ರಕರಣವು ಬಂದಿತ್ತು. ಅಲ್ಪಮತದ ಸರ್ಕಾರವು ಅಲ್ಪ ಅಂತರದಲ್ಲಿ ಉಳಿದುಕೊಂಡಿತ್ತು. ಪರವಾಗಿ 265 ಮತಗಳು ಮತ್ತು ವಿರುದ್ಧ 251 ಮತಗಳು ಬಂದಿದ್ದವು.
ಈ ನಿಬಂಧನೆಗಳು ಮುಕ್ತ ಚರ್ಚೆಗಳಿಗೆ ಅನುಕೂಲವಾಗುವ ವಾತಾವರಣವನ್ನು ಉಳಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ, ಸದಸ್ಯರಿಗೆ ಸಂಸತ್ತಿನಲ್ಲಿ ಭಾಷಣ ಮಾಡಲು, ಮತ ಹಾಕಲು ಲಂಚ ನೀಡಿದರೆ ಅಂತಹ ವಾತಾವರಣ ಹಾಳಾಗುತ್ತದೆ. ಆದ್ದರಿಂದ, ಅಂತಹ ಸಂಸದೀಯ ಸವಲತ್ತುಗಳಿಂದ ಭ್ರಷ್ಟಾಚಾರಕ್ಕೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement