
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ಖುದ್ದು ವಾದ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಚುನಾವಣಾ ಆಯೋಗವು (EC) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುತ್ತಿರುವುದನ್ನು ಪ್ರಶ್ನಿಸಿ ಅವರು ಕಾನೂನು ಹೋರಾಟ ನಡೆಸಿದ್ದಾರೆ.
ಚುನಾವಣಾ ಆಯೋಗವು “ಬಂಗಾಳದ ಸಾಮಾನ್ಯ ನಾಗರಿಕರಿಗೆ ಅಭೂತಪೂರ್ವ ಸಂಕಷ್ಟ ಮತ್ತು ಯಾತನೆಯನ್ನು ನೀಡುತ್ತಿದೆ” ಎಂದು ಕಿಡಿಕಾರಿದರು.
ನ್ಯಾಯಾಲಯ ಸಂಖ್ಯೆ 1 ರ ಮೊದಲ ಸಾಲಿನಲ್ಲಿ ಇದ್ದ ಟಿಎಂಸಿ ಮುಖ್ಯಸ್ಥೆ, ಹಿರಿಯ ವಕೀಲ ಶ್ಯಾಮ ದಿವಾನ್ ಸೇರಿದಂತೆ ಅವರ ವಕೀಲರ ತಂಡದೊಂದಿಗೆ, ಸ್ವತಃ ಪ್ರಕರಣದಲ್ಲಿ ವಾದಿ ಮಂಡಿಸಿದರು. ಖುದ್ದು ಸುಪ್ರೀಂ ಕೋರ್ಟ್ ಗೆ ಹಾಜರಾಗಿ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದರು. “ನ್ಯಾಯವು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ. ಬಂಗಾಳದ ಜನರಿಗೆ ನ್ಯಾಯ ಸಿಗುತ್ತಿಲ್ಲ,” ಎಂದು ವಾದಿಸಿದರು.
“ನಾನು ವೈಯಕ್ತಿಕವಾಗಿ ಚುನಾವಣಾ ಸಮಿತಿಗೆ ಆರು ಪತ್ರಗಳನ್ನು ಬರೆದಿದ್ದೆ, ಆದರೆ ಒಂದಕ್ಕೂ ಉತ್ತರ ಬರಲಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮಮತಾ ತಮ್ಮ ವಾದ ಮಂಡಿಸಲು 5 ನಿಮಿಷ ಕೇಳಿದ್ದರು, ಆದರೆ ಮುಖ್ಯ ನ್ಯಾಯಮೂರ್ತಿಗಳು ಅವರಿಗೆ 15 ನಿಮಿಷಗಳ ಕಾಲಾವಕಾಶ ನೀಡಿದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾರಣಗಳೇನು?
ಮಮತಾ ಬ್ಯಾನರ್ಜಿ ಅವರ ವಾದದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಮುಂಬರುವ ಮಾರ್ಚ್/ಏಪ್ರಿಲ್ ಚುನಾವಣೆಯ ಮತದಾರರ ಪಟ್ಟಿಯು 2005ರ ದತ್ತಾಂಶದ ಮೇಲೆ ಆಧಾರಿತವಾಗಿರಬೇಕು, 2026ರ ವಿಶೇಷ ಪರಿಷ್ಕರಣೆಯ (SIR) ಆಧಾರದ ಮೇಲಲ್ಲ ಎಂದು ಅವರು ಕೋರಿದರು.
ಆಡಳಿತಾರೂಢ ಬಿಜೆಪಿ ಪಕ್ಷದ ನಿರ್ದೇಶನದಂತೆ ಚುನಾವಣಾ ಅಧಿಕಾರಿಗಳು ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು.
“ಎರಡು ವರ್ಷ ತಗಲುವ ಪ್ರಕ್ರಿಯೆಯನ್ನು ಮೂರೇ ತಿಂಗಳಲ್ಲಿ ಮುಗಿಸಲು ಆಯೋಗ ಮುಂದಾಗಿದೆ. ಬಂಗಾಳವನ್ನೇ ಏಕೆ ಗುರಿಯಾಗಿಸಲಾಗುತ್ತಿದೆ? ಅಸ್ಸಾಂನಲ್ಲಿ ಈ ಪ್ರಕ್ರಿಯೆ ಏಕೆ ನಡೆಯುತ್ತಿಲ್ಲ?” ಎಂದು ಪ್ರಶ್ನಿಸಿದರು.
ರಾಜ್ಯಾದ್ಯಂತ ನಿಯೋಜಿಸಲಾದ 8,300 ‘ಮೈಕ್ರೋ ಅಬ್ಸರ್ವರ್ಗಳನ್ನು’ ಅವರು “ಬಿಜೆಪಿ ಅಧಿಕಾರಿಗಳು” ಎಂದು ಕರೆದರು ಮತ್ತು ಅವರ ನೇಮಕಾತಿಯು ಅಸಂವಿಧಾನಿಕ ಎಂದು ಪ್ರತಿಪಾದಿಸಿದರು.
ಮತದಾರರ ಗುರುತಿನ ಪುರಾವೆಯಾಗಿ ಕೇಂದ್ರ ಸರ್ಕಾರ ನೀಡಿರುವ ಬಯೋಮೆಟ್ರಿಕ್ ದಾಖಲೆಯಾದ ‘ಆಧಾರ್’ ಅನ್ನು ಸ್ವೀಕರಿಸಲು ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದರು.
‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ)…
ಹೆಸರು ಅಥವಾ ತಂದೆಯ ಉಪನಾಮದಲ್ಲಿನ ಸಣ್ಣಪುಟ್ಟ ತಪ್ಪುಗಳ (Typos) ಹೆಸರಿನಲ್ಲಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಮಮತಾ ದೂರಿದರು.
ಮದುವೆಯ ನಂತರ ಉಪನಾಮ ಬದಲಾಯಿಸಿದ ಮಹಿಳೆಯರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೆಲಸದ ನಿಮಿತ್ತ ವಿಳಾಸ ಬದಲಿಸಿದ ಬಡವರನ್ನೂ ‘ತಾರ್ಕಿಕ ವ್ಯತ್ಯಾಸ’ದಡಿ ಕೈಬಿಡಲಾಗಿದೆ. ಅಂತಹವರನ್ನು ವಿಚಾರಣೆಗೆ ಕರೆಯದೆ ತಕ್ಷಣವೇ ಮರು ಸೇರ್ಪಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನೋಟಿಸ್ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುತ್ತಿರುವುದಕ್ಕಾಗಿ ಆಯೋಗವನ್ನು ‘ವಾಟ್ಸಾಪ್ ಕಮಿಷನ್’ ಎಂದು ಕರೆದರು.
ವಿಶೇಷ ಪರಿಷ್ಕರಣಾ ಕಾರ್ಯದಲ್ಲಿ ತೊಡಗಿರುವ 100ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (BLO) ಚುನಾವಣಾ ಆಯೋಗದ ಕಿರುಕುಳ ಮತ್ತು ಒತ್ತಡದಿಂದಾಗಿ ಮೃತಪಟ್ಟಿದ್ದಾರೆ. ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಮತಾ ಆರೋಪಿಸಿದರು.
ಮಮತಾ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.



ನಿಮ್ಮ ಕಾಮೆಂಟ್ ಬರೆಯಿರಿ