ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ನಡೆಸಿದ ಆರೋಪದಡಿ ಬಿಹಾರದ ಖ್ಯಾತ ಯೂಟ್ಯೂಬರ್ ಮಣೀಶ ಕಶ್ಯಪ್ ಸೇರಿದಂತೆ ನಾಲ್ವರು ಸಾಮಾಜಿಕ ಜಾಲತಾಣ ಇನ್ಫ್ಲುವೆನ್ಸರ್ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಣೀಶ ಕಶ್ಯಪ್ ಹೊರತುಪಡಿಸಿ, ದೇಸಿ ಬಾಯ್ಸ್ ಎನ್ಸಿಆರ್ (Desi BoysNCR), ಹರ್ಷಿತ್ ರಾಠಿ ಮತ್ತು ಅಂಕಲೇಶ ಇನ್ವಾಟೆ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ನಾಲ್ವರು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಡಿಯೊಗಳನ್ನು ಹರಿಬಿಟ್ಟು, ಎಥೆನಾಲ್ ಇಂಧನ (E20) ಬಳಕೆಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ವಂಚನೆ ಹಾಗೂ ನಕಲಿ ವ್ಯವಹಾರಗಳು ನಡೆಯುತ್ತಿವೆ ಎಂದು ತಪ್ಪುದಾರಿಗೆಳೆಯುವ ಮಾಹಿತಿ ಪ್ರಸಾರ ಮಾಡಿದ್ದರು. ಈ ವಿಡಿಯೊಗಳ ಮೂಲಕ ಎಥೆನಾಲ್ ನೀತಿಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ನಡೆಯುತ್ತಿದೆ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಎಥೆನಾಲ್ಗೆ ಸಂಬಂಧಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೀತಿಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದನ್ನು ಪೂರ್ವನಿಯೋಜಿತ ಅಪಪ್ರಚಾರ ಅಭಿಯಾನ ಎಂದು ಆರೋಪಿಸಿರುವ ಬಿಜೆಪಿಯ ನಾಗ್ಪುರ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ಶಿಶಿರ್ ತ್ರಿಪಾಠಿ ಅವರು ನಾಗ್ಪುರ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರಿನಲ್ಲಿ, ತಮ್ಮ ವಿಡಿಯೊಗಳಿಗೆ ವಿಶ್ವಾಸಾರ್ಹತೆ ನೀಡುವ ಉದ್ದೇಶದಿಂದ ಸಾಮಾನ್ಯ ನಾಗರಿಕರ ನಕಲಿ ಅಥವಾ ದಾರಿತಪ್ಪಿಸುವ ಸಂದರ್ಶನಗಳನ್ನು ಬಳಸಿಕೊಂಡಿದ್ದು, ಇದರ ಪ್ರಮುಖ ಉದ್ದೇಶ ನಿತಿನ್ ಗಡ್ಕರಿ ಅವರ ರಾಜಕೀಯ ಹಾಗೂ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತರುವುದು ಎಂದು ಆರೋಪಿಸಲಾಗಿದೆ. ಇದಲ್ಲದೆ, ಇಂತಹ ತಪ್ಪು ಮಾಹಿತಿಯನ್ನು ಹರಡುವ ಮೂಲಕ ಸಾಮಾಜಿಕ ಸೌಹಾರ್ದಕ್ಕೂ ಧಕ್ಕೆ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇವಲ ಹೆಚ್ಚಿನ ವೀಕ್ಷಣೆ (ವ್ಯೂಸ್) ಹಾಗೂ ಅನುಯಾಯಿಗಳನ್ನು (ಫಾಲೋವರ್ಸ್) ಪಡೆಯುವ ಉದ್ದೇಶದಿಂದ ಹಿರಿಯ ಕೇಂದ್ರ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸೈಬರ್ ಸೆಲ್ ತನಿಖೆಯಲ್ಲಿ ಸಾಮಾಜಿಕ ಜಾಲತಾಣ ಇನ್ಫ್ಲುವೆನ್ಸರ್ಗಳು ಪ್ರಸಾರ ಮಾಡಿದ ಮಾಹಿತಿ ಸಂಪೂರ್ಣ ಆಧಾರರಹಿತವಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲದೆ, ವಿಡಿಯೊಗಳಲ್ಲಿ ಉಲ್ಲೇಖಿಸಲಾದ ವಂಚನೆ ಪ್ರಕರಣಗಳು ಅಥವಾ ಘಟನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಯಾವುದೇ ಸಂಬಂಧ ಇಲ್ಲದಿದ್ದರೂ, ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಸ್ತುತ, ಈ ವಿಡಿಯೊಗಳ ಮೂಲ ಯಾವುದು, ಅವುಗಳ ಹಿಂದೆ ಯಾವುದೇ ಸಂಚು ಇದೆಯೇ ಎಂಬ ಕುರಿತು ನಾಗ್ಪುರ ಸೈಬರ್ ಪೊಲೀಸರು ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ