
ಶಿವಮೊಗ್ಗ: ಇತ್ತೀಚೆಗೆ ಹಿಂದೂಪರ ಸಂಘಟನೆಯೊಂದು ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ ಅವರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಇದರಲ್ಲಿ 153 ಎ (ಧರ್ಮ, ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತವಾಗಿ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಡಿಸೆಂಬರ್ 25 ರಂದು ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಮಾತನಾಡುತ್ತಾ ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ಮತ್ತು ಅವರ ಘನತೆಗೆ ಪ್ರತಿಕ್ರಿಯಿಸುವ ಹಕ್ಕು ಹಿಂದೂಗಳಿಗೆ ಇದೆ ಎಂದು ಹೇಳಿದ್ದರು.
ಇಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, “ನಮ್ಮ ಮನೆಗೆ ನುಸುಳುವವರಿಗೆ” ತಕ್ಕ ಉತ್ತರವನ್ನು ನೀಡುವಂತೆ ಸಭೆಗೆ ತಿಳಿಸಿದ್ದರು. “ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ, ಏನಿಲ್ಲವೆಂದರೂ, ತರಕಾರಿ ಕತ್ತರಿಸಲು ಬಳಸುವ ಚಾಕುಗಳನ್ನಾದರೂ ಹರಿತವಾಗಿಟ್ಟುಕೊಳ್ಳಿ…. ಯಾವಾಗ ಯಾವ ಪರಿಸ್ಥಿತಿ ಬರುತ್ತದೋ ಗೊತ್ತಿಲ್ಲ…. ಆತ್ಮರಕ್ಷಣೆ ಹಕ್ಕು ಎಲ್ಲರಿಗೂ ಇದೆ. ಯಾರಾದರೂ ನುಸುಳಿ ನಮ್ಮ ಮನೆ ಮತ್ತು ನಮ್ಮ ಮೇಲೆ ದಾಳಿ ಮಾಡಿದರೆ, ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು ಎಂದು ಅವರು ಹೇಳಿದ್ದರು.
ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಮತ್ತು ತೆಹಸೀನ್ ಪೂನವಾಲಾ ಮಂಗಳವಾರ ಠಾಕೂರ್ ಹಾಗೂ ಶಿವಮೊಗ್ಗ ಸಂಸದ ಜಿ ಕೆ ಮಿಥುನ್ ಕುಮಾರ್ ಅವರ ವಿರುದ್ಧ ”ದ್ವೇಷ ಭಾಷಣ” ಮಾಡಿದ ಆರೋಪದ ಮೇಲೆ ದೂರು ಸಲ್ಲಿಸಿದ್ದಾರೆ. ಆದಾಗ್ಯೂ, ದೂರುಗಳನ್ನು ಮೇಲ್ ಮೂಲಕ ಸ್ವೀಕರಿಸಲಾಗಿದೆ ಎಂದು ತಿಳಿಸಿದ ಎಸ್ಪಿ, ದೂರು ದಾಖಲಿಸಲು ನ್ಯಾಯವ್ಯಾಪ್ತಿಯ ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬುಧವಾರ ದೂರು ದಾಖಲಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ