ಧಾರವಾಡ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಜನರು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಬೇಸಿಗೆ ಬಂದಿದ್ದರಿಂದ ನೀರನ್ನೋ ಆಹಾರವನ್ನೋ ಹುಡುಕಿಗೊಂಡು ಊರೊಳಗೆ ಬಂದಿದ್ದ ಜಿಂಕೆಯನ್ನು ಊರ ನಾಯಿಗಳು ಅಟ್ಟಾಡಿಸಿ ಸುತ್ತುಗಟ್ಟಿ ಕಚ್ಚಿ ಗಾಯಗೊಳಿಸಿದ್ದವು.ಜಿಂಕೆಗಳ ಮೇಲೆ ನಾಯಿಗಳು ಮುಗಿಬಿದ್ದಿದ್ದ್ನು ಕಂಡ ಸ್ಥಳೀಯರು ತಕ್ಷಣವೇ ಜಿಂಕೆಯ ರಕ್ಷಣೆಗೆ ಧಾವಿಸಿದರು.
ಇದು ನಡೆದ್ದು ಧಾರವಾಡದ ಗಿರಿ ನಗರ ಬಡಾವಣೆಯಲ್ಲಿ. ಸೋಮವಾರ ಬೆಳ್ಳಂಬೆಳಿಗ್ಗೆ ಸುಮಾರು ಐದು ವರ್ಷದ ಗಂಡು ಜಿಂಕೆ ಕಾಣಿಸಿಕೊಂಡಿದ್ದು, ಜಿಂಕೆ ಕಾಣುತ್ತಿದ್ದಂತೆಯೇ ಬಡಾವಣೆಯ ನಾಯಿಗಳೆಲ್ಲಾ ಸೇರಿಕೊಂಡು ಅದರ ಮೇಲೆ ದಾಳಿ ಮಾಡಿದವು. ಕಂಗಾಲಾದ ಜಿಂಕೆ ಎಷ್ಟೇ ಯತ್ನಿಸಿದರೂ ನಾಯಿಗಳ ಸಂಘಟಿತ ದಾಳಿಯಿಂದ ತಪ್ಪಿಸಿಕೊಳ್ಳಲು ಕಷ್ಟವಾಯಿತು.ಜಿಂಕೆ ತಪ್ಪಸಿಕೊಳ್ಳುವ ವೇಳೆ ಅದರ ಕೊಂಬುಗಳು ಮುರಿದಿವೆ. ಅದರ ಕಾಲು, ಬೆನ್ನು, ಕುತ್ತಿಗೆಗೆ ನಾಯಿ ಕಡಿತದಿಂದ ಗಾಯಗಳಾಗಿವೆ. ಇದನ್ನು ನೋಡುತ್ತಿದ್ದಂತೆಯೇ ಸ್ಥಳೀಯರು ನಾಯಿಗಳನ್ನು ಓಡಿಸಿ ಪ್ರಾಣಿ ರಕ್ಷಕ ಯಲ್ಲಪ್ಪ ಜೋಡಳ್ಳಿಗೆ ಅವರಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ.
ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಯಲ್ಲಪ್ಪ, ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ರಕ್ಷಿಸಿದ್ದು, ಸದ್ಯ ಜಿಂಕೆ ಅರಣ್ಯ ಇಲಾಖೆಯಲ್ಲಿ ಆಶ್ರಯ ಪಡೆದುಕೊಂಡಿದೆ. ಜಿಂಕೆಯ ಕೊಂಬು ಮುರಿದಿದ್ದರಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಪಶುವೈದ್ಯ ಡಾ. ಅನಿಲ್ ಕುಮಾರ್ ಪಾಟೀಲ್, ಜಿಂಕೆಗೆ ಸಣ್ಣದೊಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ದೇಹದ ವಿವಿಧ ಕಡೆಗಳಲ್ಲಿ ಆಗಿದ್ದ ಗಾಯಕ್ಕೆ ಕೂಡ ಚಿಕಿತ್ಸೆ ನೀಡಿದ್ದಾರೆ. ಅದುವರೆಗೂ ನಿತ್ರಾಣಗೊಂಡಿದ್ದ ಜಿಂಕೆ ನಿಧಾನವಾಗಿ ಚೇತರಿಸಿಕೊಂಡಿತು. ಚಿಕಿತ್ಸೆ ಮುಗಿದ ಬಳಿಕ ಜಿಂಕೆಯನ್ನು ಅರಣ್ಯ ಇಲಾಖೆಗೆ ತರಲಾಯಿತು. ಸದ್ಯ ಚಿಕಿತ್ಸೆಯನ್ನು ಇಲಾಖೆಯ ಆವರಣದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ಸಂತೋಷ ಕುಮಾರ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ